6 ತಿಂಗಳ ಬಳಿಕ ಕೆರೆಯ ಆಳದಲ್ಲಿ ಪತ್ತೆಯಾಯ್ತು ಮೊಬೈಲ್​ ಫೋನ್​: ಸ್ವಿಚ್​ ಆನ್​ ಮಾಡಿದಾಗ ಕಾದಿತ್ತು ಶಾಕ್​!

IPHONe
Published on

ಲಂಡನ್​: ಕೈ ಜಾರಿ ಕೆರೆಗೆ ಬಿದ್ದ ಮೊಬೈಲ್​ ಫೋನ್​ ಆರು ತಿಂಗಳ ಬಳಿಕ ಪತ್ತೆಯಾದರೆ, ಅದರ ಸ್ಥಿತಿ ಹೇಗಿರುತ್ತದೆ? ಎಂದು ಪ್ರಶ್ನಿಸಿದರೆ ಬಹುತೇಕರ ಉತ್ತರ ಹೀಗಿರುತ್ತದೆ. ಕೆಲವೇ ಗಂಟೆಗಳು ನೀರಿನೊಳಗೆ ಮೊಬೈಲ್​ ಇದ್ದರೆ ಉಳಿಯುವುದಿಲ್ಲ. ಅಂತಹುದರಲ್ಲಿ ಆರು ತಿಂಗಳ ನೀರಿನೊಳಗೆ ಇದ್ರೆ ಆ ಮೊಬೈಲ್​ ಸಂಪೂರ್ಣ ಕೆಟ್ಟು ಹೋಗಿರುತ್ತದೆ ಎನ್ನುತ್ತಾರೆ.

ಇನ್ನು ಐಫೋನ್​ನಂತಹ ದುಬಾರಿ ಫೋನ್​ ಅನ್ನು ಯಾರು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಸಾಮಾನ್ಯವಾಗಿ ಕಡಿಮೆ ಬೆಲೆಯ ಫೋನ್​ ನೀರಿನಲ್ಲಿ ಬಿದ್ದಾಗ ಅದನ್ನು ಮರಳಿ ಪಡೆಯುವ ಪ್ರಯತ್ನವನ್ನು ಮಾಡುವ ಮಂದಿ ಐಫೋನ್​ ಬಿದ್ದಾಗ ಸುಮ್ಮನಾಗುತ್ತಾರಾ? ಮರಳಿ ಪಡೆಯುವ ಪ್ರಯತ್ನ ಮಾಡಿಯೇ ತೀರುತ್ತಾರೆ. ಈ ಪ್ರಯತ್ನದಲ್ಲಿ ಕೆಲವು ನತದೃಷ್ಟರಾಗುತ್ತಾರೆ. ಇನ್ನು ಕೆಲವು ಅದೃಷ್ಟಶಾಲಿಗಳಾಗುತ್ತಾರೆ.

ಇತ್ತೀಚೆಗೆ ಕ್ಲೇಟನ್ ಹೆಸರಿನ ಸ್ಕೂಬಾ ಡೈವರ್​ ಒಬ್ಬರು ಕೆರೆಯ ತಳದಲ್ಲಿ ಐಫೋನ್​ 11 ಅನ್ನು ಪತ್ತೆ ಹಚ್ಚಿದರು. ಅಚ್ಚರಿಯ ವಿಚಾರವೆಂದರೆ ಕೆರೆಗೆ ಬಿದ್ದು ಆರು ತಿಂಗಳಾಗಿದ್ದರೂ ಮೊಬೈಲ್​ ಇನ್ನು ಕಾರ್ಯ ನಿರ್ವಹಿಸುವುದನ್ನು ನೋಡಿ ಸ್ವತಃ ಡೈವರ್​ ಸಹ ಅಚ್ಚರಿಪಟ್ಟಿದ್ದಾರೆ.

ಅಂದಹಾಗೆ ಐಫೋನ್​​ ಪತ್ತೆಯಾಗಿದ್ದು, ಬ್ರಿಟಿಷ್​ ಕೊಲಂಬಿಯಾದ ಹ್ಯಾರಿಸನ್​ ಹಾಟ್​ ಸ್ಪ್ರಿಂಗ್​ ಲೇಕ್​ನಲ್ಲಿ. ಸ್ಕೂಬಾ ಡೈವರ್​ ಕೇವಲ ಮೊಬೈಲ್​ ಮಾತ್ರ ಪತ್ತೆ ಹಚ್ಚಲಿಲ್ಲ, ಅದರ ಮಾಲೀಕನನ್ನು ಪತ್ತೆ ಹಚ್ಚಿ ಮೊಬೈಲ್​ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರದಿದ್ದಾರೆ.

ಮೊಬೈಲ್​ ಪತ್ತೆ ಹಚ್ಚಿದ ಕ್ಷಣವನ್ನು ಸಹ ಡೈವರ್​ ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಮೊಬೈಲ್​ ಜತೆ ಕೆರೆಯ ಆಳದಲ್ಲಿ ಕೆಲವು ಗಾಜಿನ ಬಾಟಲ್​ಗಳು, ಸನ್​ಗ್ಲಾಸಸ್​ ಮತ್ತು ಲೈಟರ್​ಗಳು ಸಹ ಪತ್ತೆಯಾಗಿವೆ. ಐಫೋನ್​ 11 ಮಾತ್ರವಲ್ಲದೆ, ಮೂರು ವರ್ಷಗಳ ಹಿಂದೆ ನದಿಗೆ ಬಿದ್ದಿದ್ದ ಫ್ಲಿಪ್ ಫೋನ್​ ಸಹ ಡೈವರ್​ಗೆ ಪತ್ತೆಯಾಗಿದೆ.

ಐಫೋನ್​ 11 ಮಾಲೀಕ 2020ರ ಸೆಪ್ಟೆಂಬರ್​ ತಿಂಗಳಲ್ಲಿ ಕಳೆದುಕೊಂಡಿದ್ದನಂತೆ. ಆರು ತಿಂಗಳ ಬಳಿಕ ಡೈವರ್​ಗೆ ಪತ್ತೆಯಾಗಿದೆ. ಮಣ್ಣಿನಿಂದ ಕೂಡಿದ್ದ ಐಫೋನ್​ 11 ಅನ್ನು ಸ್ವಚ್ಛಗೊಳಿಸಿ ಆನ್​ ಮಾಡಿದಾಗ ಅದು ಆನ್​ ಆಗಿದೆ. ಇದನ್ನು ನೋಡಿದ ಡೈವರ್​ಗೆ ಅಚ್ಚರಿಯೂ ಆಗಿದೆ. ಬಳಿಕ ಮೊಬೈಲ್​ ಮೂಲಕ ಮಾಲೀಕನ ಜಾಡು ಪತ್ತೆ ಹಚ್ಚಿ ಮೊಬೈಲ್​ ಒಪ್ಪಿಸಿ ಬಂದಿದ್ದಾರೆ. ಮರಳಿ ಮೊಬೈಲ್​ ತಂದು ಕೊಟ್ಟ ಡೈವರ್​ಗೆ ಮಾಲೀಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂದಹಾಗೆ ಐಫೋನ್ ವ್ಯಾಂಕೋವರ್ ನಿವಾಸಿ ಫಾತಿಮೆ ಘೋಡ್ಸಿಗೆ ಸೇರಿದ್ದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net