ಭ್ರಷ್ಟಾಚಾರಕ್ಕೆ ಸ್ಪೀಡ್​ಬ್ರೇಕ್: ಸರ್ಕಾರದ ವರ್ಚಸ್ಸು ವೃದ್ಧಿಗಾಗಿ ಮುಖ್ಯಮಂತ್ರಿಗೆ ವರಿಷ್ಠರ ಸೂಚನೆ

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ನಿಷ್ಕ್ರಿಯ, ಸೋಮಾರಿ, ಲಂಚಬಾಕ ಅಧಿಕಾರಿಗಳು ಮತ್ತು ನೌಕರರನ್ನು ಮನೆಗೆ ಕಳುಹಿಸುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸರ್ಕಾರದ ವರ್ಚಸ್ಸು ವೃದ್ಧಿಸಿಕೊಳ್ಳಬೇಕೆಂಬ ಕಟ್ಟುನಿಟ್ಟಿನ ಸೂಚನೆಯನ್ನು ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರವಾನಿಸಿದ್ದಾರೆ. ವಿವಿಧ ಕಾರಣಗಳಿಂದಾಗಿ ಸರ್ಕಾರದ ವರ್ಚಸ್ಸು ನಿರೀಕ್ಷಿತ ಮಟ್ಟದಲ್ಲಿ ವೃದ್ಧಿಯಾಗುತ್ತಿಲ್ಲ. ಒಂದಲ್ಲ ಒಂದು ಆರೋಪಗಳು ಕೇಳಿಬರುತ್ತಲೇ ಇವೆ. ಈ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ಎದುರಿಸುವುದಕ್ಕೆ ಸಾಧ್ಯವಾಗು ವುದಿಲ್ಲವೆಂಬುದನ್ನು ಮನಗಂಡೇ ವರಿಷ್ಠರು ಇಂತಹ ಸೂಚನೆ ನೀಡಿದ್ದಾರೆ.

ರಾಜ್ಯದ ಗುತ್ತಿಗೆದಾರರ ಸಂಘ ಶೇ.40 ಪರ್ಸೆಂಟೇಜ್ ಆರೋಪ ಮಾಡಿ ಪ್ರಧಾನಿಗೆ ದೂರು ನೀಡಿದೆ. ಕರೊನಾ ಸಂದರ್ಭದಲ್ಲಿ ಖರೀದಿ ಆರೋಪವೂ ವ್ಯಾಪಕವಾಗಿ ಕೇಳಿ ಬಂದಿತ್ತು. ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಆತಂಕ ತಂದಿದೆ. ಆದ್ದರಿಂದಲೇ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೆಲ ದಿನಗಳ ಹಿಂದೆ ಸೂಚನೆ ನೀಡಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಸರ್ಕಾರದಲ್ಲಿನ ಬೆಳವಣಿಗೆಗಳ ಪ್ರತಿಯೊಂದು ಅಂಶಗಳ ಬಗ್ಗೆಯೂ ಕೇಂದ್ರದ ವರಿಷ್ಠರು ಖಾಸಗಿ ಏಜೆನ್ಸಿಗಳ ಮೂಲಕ ಮಾಹಿತಿ ಪಡೆದಿದ್ದಾರೆ.

ಅದರ ಆಧಾರದಲ್ಲೇ ಭ್ರಷ್ಟಾಚಾರದ ವಿರುದ್ಧ ದಾಳಿ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ. ಭ್ರಷ್ಟಾಚಾರದ ಮೂಲವನ್ನೇ ಕತ್ತರಿಸಬೇಕೆಂಬುದು ಅವರ ಉದ್ದೇಶ. ‘ತಾನೂ ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ’ ಎಂಬ ಘೋಷವಾಕ್ಯವನ್ನು ಜಾರಿಗೆ ತರಲು ಅಪ್ಪಣೆ ಮಾಡಿದ್ದಾರೆ.

ಮನೆಗೆ ಕಳುಹಿಸಿ: ಲಂಚ ಸರ್ವವ್ಯಾಪಿಯಾಗುತ್ತಿದೆ. ವರ್ಗಾವಣೆಯಿಂದ ಹಿಡಿದು ದೊಡ್ಡ ಯೋಜನೆಗಳ ತನಕ ಹೆಚ್ಚಾಗಿದೆ. ಲಂಚಕ್ಕೆ ಹಾತೊರೆಯುವ ಅಧಿಕಾರಿಗಳು, ಸಚಿವರು, ಶಾಸಕರ ವಿರುದ್ಧ ಕ್ರಮ ಜರುಗಿಸಿ. ಮುಲಾಜಿಲ್ಲದೆ ಮನೆಗೆ ಕಳುಹಿಸುವಂತೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕೆಲವು ಐಎಎಸ್ ಅಧಿಕಾರಿಗಳ ವಿರುದ್ಧ ಸಹ ಯಾವುದೇ ಹಿಂಜರಿಕೆ ಇಲ್ಲದೇ ಕ್ರಮ ಜರುಗಿಸಿದೆ. ರಾಜ್ಯ ಸರ್ಕಾರವೂ ಇದೇ ದಾರಿಯಲ್ಲಿ ಸಾಗಲು ಏಕೆ ಭಯಪಡಬೇಕು? ಲಂಚಬಾಕ, ನಿಷ್ಕ್ರಿಯ ಹಾಗೂ ಸೋಮಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸದಾ ಬೆಂಬಲಕ್ಕೆ ನಿಲ್ಲುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಿಎಂಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರವನ್ನೂ ನೀಡಿದ್ದಾರೆ.

ಬಿಡಿಎ ದಾಳಿಗೆ ಪ್ರಶಂಸೆ: ಬಿಡಿಎನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ನಡೆದ ದಾಳಿಯನ್ನು ಪ್ರಶಂಸಿಸಲಾಗಿದೆ. ಅದೇ ಮಾದರಿಯಲ್ಲಿ ಇತರೆಡೆಯೂ ದಾಳಿ ನಡೆಯಲಿ, ಆಗ ಸಾರ್ವಜನಿಕವಾಗಿಯೂ ಸರ್ಕಾರದ ವರ್ಚಸ್ಸು ವೃದ್ಧಿಯಾಗುತ್ತದೆ. ಪರಿಣಾಮ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದು ಒಟ್ಟಾರೆ ಉದ್ದೇಶ.

ಎಸಿಬಿಗೆ ಮುಕ್ತ ಅವಕಾಶ: ವ್ಯಾಪಕ ದಾಳಿ ನಡೆದಾಗ ಮಾತ್ರ ಸರ್ಕಾರದ ಬಗ್ಗೆ ಅಧಿಕಾರಿ ಮತ್ತು ನೌಕರರಿಗೂ ಭಯ ಬರುತ್ತದೆ. ಆದರೆ ವಿಚಾರಣೆಗೆ ಸಕ್ಷಮ ಪ್ರಾಧಿಕಾರಗಳು ತಕ್ಷಣ ಅನುಮತಿ ನೀಡುವಂತೆ ಆಗಬೇಕು. ಅದೇ ರೀತಿ ಶಿಕ್ಷೆಯೂ ಆಗುವಂತೆ ನೋಡಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಸಿಎಂ ಮೇಲೆ ದೊಡ್ಡ ಜವಾಬ್ದಾರಿ ಬಿದ್ದಿದೆ.

ವ್ಯಾಪಕ ದಾಳಿಗೆ ಸೂಚನೆ: ಎಸಿಬಿ ಮೂಲಕ ದಾಳಿಯನ್ನು ಕೂಡಲೇ ಇನ್ನಷ್ಟು ವ್ಯಾಪಕಗೊಳಿಸಬೇಕು. ಕೇವಲ ಕಿರಿಯ ಅಧಿಕಾರಿಗಳಲ್ಲದೆ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನೂ ಗುರಿಯಾಗಿಟ್ಟು ದಾಳಿಗಳಾಗುವಂತೆ ನೋಡಿಕೊಳ್ಳುವ ಬಗ್ಗೆ ಸೂಚನೆಗಳಿವೆ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.

ತಡೆ ಸಿಗದಂತೆ ಎಚ್ಚರವಹಿಸಿ: ದಾಳಿಯಾದ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗುತ್ತಿದೆ. ಇದಕ್ಕೆ ಕಾರಣ ಸರಿಯಾದ ರೀತಿ ಕಾನೂನಿನ ಅಂಶ ಬಳಸಿಕೊಳ್ಳದೇ ಇರುವುದು. ಆ ರೀತಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂಬ ಸಲಹೆಯೂ ಇದೆ.

ಬಿಟ್ ತನಿಖೆ ಬಗ್ಗೆ ಅತೃಪ್ತಿ: ಬಿಟ್ ಕಾಯಿನ್ ಕುರಿತ ತನಿಖೆ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂಬುದು ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪ್ರಕರಣ ಸರ್ಕಾರದ ಇಮೇಜಿಗೂ ಧಕ್ಕೆ ತಂದಿತ್ತು.

ಸೋಮಾರಿಗಳ ಅಗತ್ಯವಿಲ್ಲ: ಕೆಲ ಅಧಿಕಾರಿಗಳು ಭಷ್ಟರಲ್ಲದಿದ್ದರೂ ಸೋಮಾರಿಗಳಾಗಿದ್ದಾರೆ. ಇನ್ನೂ ಕೆಲವರು ನಿಷ್ಕ್ರಿಯ ಮನೋಭಾವ ಹೊಂದಿದ್ದಾರೆ. ಇಂತಹ ಅಧಿಕಾರಿ ಮತ್ತು ನೌಕರರು ಸರ್ಕಾರಕ್ಕೆ ಹೊರೆ. ಅಂತಹವರಿಂದ ಹೊಸತನದ ಹಾಗೂ ಚುರುಕಿನ ಆಡಳಿತ ಸಾಧ್ಯವಿಲ್ಲ. ಆದ್ದರಿಂದ ಅಂತಹವರು ಅಗತ್ಯವಿಲ್ಲ. ಕೇಂದ್ರದಲ್ಲಿ ಅಧಿಕಾರೇತರರನ್ನು ಕೆಲವು ಇಲಾಖೆಗಳಿಗೆ ನೇಮಕ ಮಾಡಿದ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬಹುದೆಂಬ ಸಲಹೆಯೂ ಬಂದಿದೆ. 1.70 ಲಕ್ಷ ಕಡತಗಳು ವಿಲೇವಾರಿ ಆಗದಿರುವುದು ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿ ಎಂಬುದು ವರಿಷ್ಠರ ಅನಿಸಿಕೆ ಎನ್ನಲಾಗಿದೆ.

ಕಾನೂನು ತಿದ್ದುಪಡಿ: ಆಡಳಿತ ಯಂತ್ರ ಚುರುಕುಗೊಳಿಸಲು ಅಗತ್ಯಬಿದ್ದರೆ ಸೇವಾ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ಮಾಡಲು ಆಲೋಚಿಸುವಂತೆಯೂ ವರಿಷ್ಠರು ಹೇಳಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

ಎಸಿಬಿ ದಾಳಿ ಪ್ರಕರಣಗಳ ವಿವರ

  • ದಾಖಲಾದ ಪ್ರಕರಣ 1803
  • ದೋಷಾರೋಪ ಪಟ್ಟಿ ಸಲ್ಲಿಕೆ 753
  • ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯ 62
  • ವಿಚಾರಣೆಯಲ್ಲಿರುವ ಪ್ರಕರಣ 682
  • ಶಿಕ್ಷೆಯಾದ ಪ್ರಕರಣ 10
  • ಖುಲಾಸೆಯಾದ ಪ್ರಕರಣ 25
  • ಬಂಧಿಸಿದ ನೌಕರರು 1473
  • ಸಿಬಿಐಗೆ ವರ್ಗ 2
  • ಅಮಾನತಾದ ನೌಕರರು 1335
  • ಇಲಾಖಾ ವಿಚಾರಣೆ 493
  • ಪೂರ್ವಾನುಮತಿಗೆ ಬಾಕಿ ಇರುವ ಪ್ರಕರಣ 520
  • ನೌಕರರ ವಿರುದ್ಧ ದೋಷಾರೋಪ ಪಟ್ಟಿ 106
  • ತಡೆಯಾಜ್ಞೆ ಸಿಕ್ಕ ಪ್ರಕರಣ 87
  • ಕ್ಲಾಸ್ ಒನ್ ಅಧಿಕಾರಿ ಮತ್ತು ರಾಜಕಾರಣಿಗಳ ವಿರುದ್ಧ 391

ಯಾವ ಇಲಾಖೆಗಳು ಟಾರ್ಗೆಟ್?: ಹೆಚ್ಚಿನ ಹಣಕಾಸಿನ ವಹಿವಾಟು ಇರುವ ಜಲ ಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಆರೋಗ್ಯ ಇಲಾಖೆಗಳನ್ನು ಮೊದಲು ಸ್ವಚ್ಛಗೊಳಿಸುವ ಸಾಧ್ಯತೆಗಳಿವೆ. ಈ ಇಲಾಖೆಗಳಲ್ಲಿ ಯಾರು ಭ್ರಷ್ಟರಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರಮುಖ ಸಲಹೆಗಳು

  • ಭ್ರಷ್ಟರ ವಿರುದ್ಧ ದಾಳಿ ಇನ್ನಷ್ಟು ಚುರುಕಾಗಬೇಕು
  • ದಾಳಿಗೆ ಒಳಗಾಗುವ ಅಧಿಕಾರಿ, ನೌಕರರ ವಜಾ ಆಗಬೇಕು
  • ನ್ಯಾಯಾಲಯದಲ್ಲಿ ತಡೆ ಸಿಗದಂತೆ ಎಚ್ಚರ ವಹಿಸಬೇಕು
  • ಚುನಾವಣೆಗೆ ಮುನ್ನ ಸರ್ಕಾರದ ಇಮೇಜ್ ವೃದ್ಧಿಯಾಗಬೇಕು

ಕಾರಣಗಳೇನು?

  • ಭ್ರಷ್ಟಾಚಾರ ಮಿತಿಮೀರಿದೆ ಎಂಬ ಅಭಿಪ್ರಾಯ
  • ಆಡಳಿತ ಯಂತ್ರ ಕುಸಿದಿದೆ ಎಂಬ ಅನಿಸಿಕೆ
  • ಚುರುಕಾಗದ ಕಡತ ವಿಲೇವಾರಿ
  • ಪ್ರತಿಪಕ್ಷಗಳಿಂದ ಕೇಳಿಬರುತ್ತಿರುವ ಆರೋಪ

ಆಡಳಿತ ಯಂತ್ರಕ್ಕೆ ಚುರುಕು: ಇಂದು-ನಾಳೆ ಸಿಇಒ, ಡಿಸಿಗಳ ಜತೆ ಮಹತ್ವದ ಸಭೆ

ಸಾಲುಸಾಲು ಚುನಾವಣೆಗಳು ಹಾಗೂ ಇತರ ಕಾರಣದಿಂದ ಜಿಡ್ಡುಗಟ್ಟಿರುವ ಆಡಳತ ಯಂತ್ರಕ್ಕೆ ಚುರುಕು ಮೂಡಿಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗುರುವಾರದಿಂದ ಎರಡು ದಿನ ಮಹತ್ವದ ಸಭೆ ನಡೆಸಲಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ.

ಗುರುವಾರ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಹಾಗೂ ಶುಕ್ರವಾರ ಜಿಲ್ಲಾಧಿಕಾರಿಗಳ ಸಭೆ ನಡೆಯಲಿದೆ. ಇದುವರೆಗೆ ಅಧಿಕಾರಿಗಳು ತಾವೇ ವರದಿ ಸಿದ್ಧಪಡಿಸಿಕೊಂಡು ಬಂದು ವಿವರಿಸುತ್ತಿದ್ದರು. ಯೋಜನಾ ಇಲಾಖೆ ಸಿದ್ಧಪಡಿಸುವ ವರದಿ ಆಧಾರದಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಇದೇ ಮೊದಲ ಬಾರಿಗೆ ಸಭೆಗೆ ಪ್ರತ್ಯೇಕವಾದ ಚೌಕಟ್ಟು ರೂಪಿಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಯೋಜನೆಗಳ ಪ್ರಗತಿಯ ವಿವರಗಳನ್ನು ನೀಡಬೇಕು. ಹಣಕಾಸಿನ ಬಿಡುಗಡೆ, ಖರ್ಚು, ಉಳಿತಾಯ ಅಥವಾ ಕೊರತೆ ಬಗ್ಗೆಯೂ ವಿವರ ನೀಡಬೇಕು. ಯೋಜನೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ತಿಳಿಸಬೇಕು. ಆ ರೀತಿಯಲ್ಲಿಯೇ ಪ್ರಶ್ನಾವಳಿಯನ್ನು ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಅದರ ಪ್ರಕಾರ, ಅವರು ಸಿದ್ಧರಾಗಿ ಬರಬೇಕಾಗಿದೆ ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಜಿಲ್ಲಾವಾರು ಪ್ರಗತಿ ಪರಿಶೀಲನೆಯೂ ಇದೇ ವೇಳೆ ನಡೆಯಲಿದೆ. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಸರ್ಕಾರದ ಯೋಜನೆಗಳು ಸರಿಯಾದ ನಿಟ್ಟಿನಲ್ಲಿ ಅನುಷ್ಠಾನವಾಗಿ ಸಾರ್ವಜನಿಕರಿಗೆ ತಲುಪಿಸುವ ಬಗ್ಗೆ ಅಧಿಕಾರಿಗಳಿಗೆ ಬಸವರಾಜ ಬೊಮ್ಮಾಯಿ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ.

ಕರೊನಾ ನಿಯಂತ್ರಣ: ಕರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿದ್ದು, ಒಮಿಕ್ರಾನ್ ಸಹ ವ್ಯಾಪಿಸುತ್ತಿದೆ. ಸೋಂಕು ನಿಯಂತ್ರಣ ಮಾಡದಿದ್ದರೆ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಕರೊನಾ ದಿನೇದಿನೆ ಹೆಚ್ಚಾಗುತ್ತಿರುವ ಕಾರಣ ರಾಜ್ಯದಲ್ಲಿ ಅದರ ನಿಯಂತ್ರಣದ ಬಗ್ಗೆ ಜಿಲ್ಲಾಡಳಿತಕ್ಕೆ ಸಲಹೆಗಳನ್ನು ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net