

‘ಎಂಜಲ ಮಾತು ನುಡಿಯುವ ರಂಜಕರೆಲ್ಲರು/ಮಿಗೆ ಮಗೆ ಮೀಸಲ ತಾವೆತ್ತ ಬಲ್ಲರೊ?/ ಮಾತಿನ ಬಣವೆಯ ಮೇದ ಪಶು/ ಪ್ರಾಣಿಯಂತೆ ಎಂಜಲ ಮಾತು ನುಡಿಯುತ್ತಿಹರು/ ಲಿಂಗಸಕೀಲ ಸಹಯೋಗದ ಮರ್ಮಸ್ಥಲವನವರೆತ್ತ ಬಲ್ಲರು?/ಕೂಡಲ ಚನ್ನ ಸಂಗಯ್ಯನಲ್ಲಿ ಶಬ್ದಸೂತಕಿಗಳೆಲ್ಲರೂ ರೌರವ ನರಕಿಗಳು!’
-ಬಾಯಿಮುಟ್ಟಿದ ಪದಾರ್ಥ ಮಾತ್ರ ಎಂಜಲೆಂದಲ್ಲ, ಆಡಿದ ಮಾತು ಸಹ ಎಂಜಲಾಗುತ್ತದೆ. ಗುರುಲಿಂಗದ ಮಹತ್ತ್ವವನರಿಯದವರ ಮಾತುಗಳೆಲ್ಲ ಎಂಜಲು. ಇನ್ನೊಬ್ಬರ ನುಡಿಯನ್ನು ಅವರ ಗ್ರಂಥಸ್ಥ ವಾಕ್ಯಗಳನ್ನು ತನ್ನದೆಂದು ಉಪದೇಶಗೈದು ಅರಿತವನೆನಿಸಿಕೊಳ್ಳಲು ಹವಣಿಸುವುದರಿಂದ ಶಬ್ದ ಸೂತಕಕ್ಕೆ ಸಿಕ್ಕಿಕೊಂಡಂತಾಗುತ್ತದೆ. ಮತ್ತೊಬ್ಬರ ನುಡಿಗಳನ್ನು ತಮ್ಮ ನುಡಿಗಳನ್ನಾಗಿ ಮಾಡಿಕೊಂಡರೆ, ‘ಹಸು ಹೆರವರ ಹುಲ್ಲುಬಣವೆಯ ಮೆಯ್ದಂತೆ’ ಎಂದು ಚನ್ನಬಸವಣ್ಣ ನವರು ಅರ್ಥಪೂರ್ಣವಾಗಿ ಹೇಳಿದ್ದಾರೆ.
ಅಂತಹವರಿಗೆ ಲಿಂಗದ ಮಹತ್ತ್ವ ತಿಳಿಯದು. ಅನುಭವದಾಳ ಗುರುತಿಸಲ್ಪಡದು. ಇನ್ನು ಸಮರಸ ಸ್ಥಲದ ಮಾತಂತೂ ಬಹುದೂರ. ಉದಾಹರಣೆಗೆ: ಒಬ್ಬ ಹರಿಕೀರ್ತನೆ ಮಾಡುತ್ತಿದ್ದ. ಏಕಾದಶಿ ದಿನ ದೇವಸ್ಥಾನದಲ್ಲಿ ಕೀರ್ತನೆ ಇತ್ತು. ಆ ಸಭೆಗೆ ಆತನ ಹೆಂಡತಿಯೂ ಬಂದಿದ್ದಳು. ಈ ಕೀರ್ತನಕಾರ ‘ಇಂದು ಏಕಾದಶಿ. ವೈಕುಂಠಕ್ಕೆ ಹೋಗಬೇಕೆನ್ನುವವರೆಲ್ಲ ಉಪವಾಸ ವ್ರತ ಆಚರಿಸಬೇಕು’ ಎಂದ. ಇದನ್ನು ಕೇಳಿದ ಅವನ ಹೆಂಡತಿ ಮನೆಯಲ್ಲಿ ತಯಾರಿಸಿದ್ದ ಊಟವನ್ನು ಗೋವುಗಳಿಗೆ ನೀಡಿಬಿಟ್ಟಳು.
ಗಂಡ ಹರಿಕೀರ್ತನೆ ಮುಗಿಸಿ ಬಂದು, ‘ಹಸಿವೆಯಾಗಿದೆ ಊಟಕ್ಕೆ ಬಡಿಸು’ ಎಂದ. ಆಗ ಹೆಂಡತಿ ‘ಸ್ವಾಮಿ! ತಾವು ಏಕಾದಶಿ ದಿನ ಊಟ ಮಾಡಿದರೆ ನರಕಕ್ಕೆ ಹೋಗುತ್ತಾರೆ ಎಂದಿರಲ್ಲಾ! ಅದಕ್ಕೆ ನಾನು ಎಲ್ಲ ಆಹಾರವನ್ನೂ ಹಸುಗಳಿಗೆ ನೀಡಿಬಿಟ್ಟೆ’ ಎಂದಳು. ‘ಅಯ್ಯೋ ಹುಚ್ಚಿ! ಅದು! ನನ್ನದು ನುಡಿದು ಹೇಳುವ ಕೆಲಸ, ನಡೆಯುವದೇನಿದ್ದರೂ ಕೇಳುವವರ ಕೆಲಸ’ ಎಂದನಂತೆ. ಇಂಥವರು ‘ಆಚಾರವ ನುಡಿವೆ ಅನಾಚಾರವ ನಡೆವೆ’ನೆಂಬವರು. ಇವರ ಜಾಣತನಕ್ಕೆ ಯಾವ ಬೆಲೆಯೂ ಇಲ್ಲ. ಮಾತು ಮನದಾಳದಿಂದ ಬಂದು, ಆಚಾರದಲ್ಲಿಳಿದಾಗ ಆ ಮಾತೇ ಜ್ಯೋತಿರ್ಲಿಂಗ.