ಖಾಕಿ ಪಡೆಗೆ ಸುಳಿವು ಬಿಟ್ಟುಕೊಡದ ಕಸ್ತೂರಿ ಶಂಕರ್! ನಟಿಯ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಚೆನ್ನೈ ಪೊಲೀಸ್​

ವಿಜಯವಾಣಿ - 2024-11-16T174454.187
Published on

ಹೈದರಾಬಾದ್​: ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಬಂಧನ ಭೀತಿ ಎದುರಿಸುತ್ತಿರುವ ನಟಿ ಕಸ್ತೂರಿ ಶಂಕರ್, ಸದ್ಯ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ. ಈಕೆಗಾಗಿ ಖಾಕಿ ಪಡೆ ತೀವ್ರ ಹುಡುಕಾಟ ನಡೆಸುತ್ತಿದೆ. ಆದರೂ ಸಹ ಈವರೆಗೆ ಕಸ್ತೂರಿಯ ಸುಳಿವು ಮಾತ್ರ ಲಭ್ಯವಾಗಿಲ್ಲ. ಇದರ ನಡುವೆ ಕಸ್ತೂರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿದ ನ್ಯಾಯಾಲಯ, ಆಕೆಯ ತಪ್ಪನ್ನು ಎತ್ತಿಹಿಡಿದಿದೆ. ಸದ್ಯ ತನ್ನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಟಿ ಯಾರ ಕೈಗೂ ಸಿಗದಂತೆ ಸುಳಿವನ್ನು ಮರೆಮಾಚಿದ್ದಾರೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಸೌತ್​ ಬ್ಯೂಟಿ ಬಂಧನವಾಗುವ ಸಾಧ್ಯತೆ ಇದೆ.

ಪೊಲೀಸರಿಂದ ತಲೆಮರೆಸಿಕೊಂಡಿರುವ ತಮಿಳು ನಟಿ ಕಸ್ತೂರಿ ಶಂಕರ್ ಪತ್ತೆಹಚ್ಚಲು ಚೆನ್ನೈ ಪೊಲೀಸ್ ಆಯುಕ್ತರು ಇದೀಗ ಆಂಧ್ರಪ್ರದೇಶಕ್ಕೆ ವಿಶೇಷ ತಂಡವನ್ನು ಕಳುಹಿಸಿದ್ದಾರೆ. ನವೆಂಬರ್ 14ರಂದು, ತೆಲುಗು ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಕಸ್ತೂರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತು. ಜಾಮೀನು ರದ್ದಾದ ಬೆನ್ನಲ್ಲೇ ನಟಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ.

ಏನಿದು ವಿವಾದ?

ನವೆಂಬರ್ 3ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಬಲಪಂಥೀಯ ಸಂಘಟನೆಯಾದ ಹಿಂದು ಮಕ್ಕಳ್ ಕಚ್ಚಿ (ಎಚ್‌ಎಂಕೆ) ಸಂಸ್ಥಾಪಕ ಅರ್ಜುನ್ ಸಂಪತ್ ಆಯೋಜಿಸಿದ್ದ ಸಮಾವೇಶದಲ್ಲಿ ಅಸ್ಪೃಶ್ಯತೆಯಂತಹ ಜಾತಿ ಪದ್ಧತಿಯನ್ನು ರದ್ದುಗೊಳಿಸಿರುವ ನಾಗರಿಕ ಹಕ್ಕುಗಳ ರಕ್ಷಣೆ (ಪಿಸಿಆರ್) ಕಾಯ್ದೆಯ ಅಡಿಯಲ್ಲಿ ಬ್ರಾಹ್ಮಣರಿಗೂ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಈ ಸಮಾವೇಶದಲ್ಲಿ ಮಾತನಾಡಿದ ಕಸ್ತೂರಿ, 300 ವರ್ಷಗಳ ಹಿಂದೆ ರಾಜನ ಸಂಗಾತಿಯ ಸಹಾಯಕರಾಗಿ ತೆಲುಗು ಮಂದಿ ತಮಿಳುನಾಡಿಗೆ ಬಂದಿದ್ದರು. ಅದಾದ ಬಳಿಕ ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು ಎಂದು ಕಸ್ತೂರಿ ಹೇಳಿಕೆ ನೀಡಿದ್ದರು. ಇದು ತಮಿಳು ಮತ್ತು ತೆಲುಗು ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net