

ಆರ್.ತುಳಸಿಕುಮಾರ್
ಬೆಂಗಳೂರು: ಆಸ್ತಿ ನೋಂದಣಿಗೆ ಕಡ್ಡಾಯ ಮಾಡಿರುವ ಇ-ಖಾತಾ ದಾಖೆಲೆಯಲ್ಲಿನ ತಪ್ಪುಗಳನ್ನು ತಿದ್ದಲು ಪಾಲಿಕೆ ನಿರತವಾಗಿದ್ದು, ಸೋಮವಾರ (ನ.18) ಅಧಿಕೃತವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಕಳೆದೊಂದು ತಿಂಗಳಿನಿಂದ ನಾಗರಿಕರು ಇ-ಖಾತಾ ಪಡೆಯಲು ಪರದಾಟ ನಡೆಸುತ್ತಿದ್ದಾರೆ. ಈ ಸೌಲಭ್ಯ ಒದಗಿಸಲು ರೂಪಿಸಿರುವ ಸಾಫ್ಟ್ವೇರ್ನಲ್ಲಿ ಕೆಲ ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ಜನರಿಗೆ ತ್ವರಿತವಾಗಿ ಸೇವೆ ಸಿಗುತ್ತಿರಲಿಲ್ಲ. ಈಗ ಈ ಲೋಪವನ್ನು ಸರಿಪಡಿಸಿಕೊಂಡಿರುವ ಪಾಲಿಕೆಯು ಕಾಲಮಿತಿಯಲ್ಲಿ ಸೌಲಭ್ಯ ಒದಗಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಮೊದಲ ಹಂತವಾಗಿ ಆಸ್ತಿದಾರರ ದಾಖಲೆಯಲ್ಲಿ ನುಸುಳಿರುವ ತಪ್ಪುಗಳನ್ನು ಸರಿಪಡಿಸಲಾಗುತ್ತಿದೆ. ಈ ಕಾರ್ಯ ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದ್ದು, ನ.18 ಅಥವಾ 19ರಂದು ಬಿಡುಗಡೆಯಾಗಲಿದೆ.
ಆಸ್ತಿದಾರರ ದಾಖಲೆಯಲ್ಲಿ ಹೆಸರು, ವಿಳಾಸ, ವಿಸ್ತೀರ್ಣ, ದಿನಾಂಕ ಹಾಗೂ ಇತರ ಕೆಲ ಅಂಶಗಳು ತಪ್ಪಾಗಿ ನಮೂದಾಗಿದ್ದರೆ ಅಂತಹವುಗಳನ್ನು ಸರಿಪಡಿಸಿಕೊಡಲಾಗುತ್ತದೆ. ಡಿಜಿಟಲೀಕರಣವನ್ನು ದಾಖಲಾತಿ ಪುಸ್ತಕದಲ್ಲಿ ಹೇಗಿತ್ತೋ ಅದೇ ರೂಪದಲ್ಲಿ ತಂತ್ರಾಂಶಕ್ಕೆ ಅಳವಡಿಸಲಾಗಿದೆ. ಹೀಗಾಗಿ ತಪ್ಪುಗಳು ನುಸುಳಿವೆ. ಇದರಲ್ಲಿ ಆಸ್ತಿದಾರರು, ಅಧಿಕಾರಿಗಳು ಹಾಗೂ ಡೇಟಾ ಆಪರೇಟರ್‌ಗಳ ಕಣ್ತಪ್ಪಿನಿಂದ ಆಗಿವೆ. ಇದನ್ನೀಗ ಸರಿಪಡಿಸಲಾಗುತ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ 22 ಲಕ್ಷ ಆಸ್ತಿಗಳ ಕರಡು ದಾಖಲೆಯನ್ನು ಅಪ್‌ಲೋಡ್ ಮಾಡಲಾಗಿದೆ. ಇವುಗಳನ್ನು ಪರಾಮರ್ಶಿಸಿ ಆಸ್ತಿದಾರರು ತಮ್ಮ ಸ್ವತ್ತಿನ ದಾಖಲೆಯನ್ನು ಅಪ್‌ಲೋಡ್ ಮಾಡಿದ ಬಳಿಕ ಆಯಾ ಎಆರ್‌ಒಗಳು ಪರಿಶೀಲಿಸಿ ಅಂತಿಮ ಇ-ಖಾತಾ ನೀಡಲು ಶಿಾರಸು ಮಾಡುತ್ತಾರೆ. ಇದನ್ನು ಇನ್ನೊಮ್ಮೆ ಮೇಲಾಧಿಕಾರಿಗಳು ಪರಾಮರ್ಶಿಸಿ ಆಸ್ತಿದಾರರಿಗೆ ಸೌಲಭ್ಯವನ್ನು ಅಧಿಕೃತವಾಗಿ ವಿತರಿಸಲಾಗುತ್ತದೆ ಎಂದು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಅಮಾನತಿಗೆ ಚಿಂತನೆ:
ನೈಜ ಆಸ್ತಿದಾರರಿಗೆ ಇ-ಖಾತಾವನ್ನು ಕಾಲಮಿತಿಯೊಳಗೆ ಪರಿಶೀಲಿಸಿ ಸೌಲಭ್ಯ ನೀಡದ ಸಹಾಯಕ ಕಂದಾಯ ಅಧಿಕಾರಿಗಳ (ಎಆರ್‌ಒ) ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ. ಸಾರ್ವಜನಿಕರು ಪದೇ ಪದೆ ಸಹಾಯವಾಣಿ ಹಾಗೂ ಹಿರಿಯ ಅಧಿಕಾರಿಗಳಿಗೆ ಫೋನಾಯಿಸಿ ಕೆಲ ಎಆರ್‌ಒಗಳ ವಿರುದ್ಧ ದೂರು ನೀಡಿದ್ದಾರೆ. ಇಂತಹ ಅಧಿಕಾರಿಗಳು ನಿಯಮಾನುಸಾರ ಜನರಿಗೆ ಸೌಲಭ್ಯ ಒದಗಿಸಬೇಕು. ಕರ್ತವ್ಯ ವಿಮುಖರಾಗುವ ಎಆರ್‌ಒಗಳನ್ನು ಅಮಾನತು ಮಾಡಲು ಡಿಸಿಎಂ ಸೂಚಿಸಿರುವುದರಿಂದ ಡಿ.1ರಿಂದ ಈ ಶಿಕ್ಷೆಯನ್ನು ಜಾರಿಗೆ ತರಲಾಗುತ್ತದೆ.
5 ಲಕ್ಷ ಆಸ್ತಿಗೆ ಹೊಸದಾಗಿ ಖಾತಾ ಸೌಲಭ್ಯ:
ನಗರದಲ್ಲಿ ಈವರೆಗೂ 5 ಲಕ್ಷ ಆಸ್ತಿಗಳಿಗೆ ಯಾವುದೇ ಬಗೆಯ ಖಾತಾ ದಾಖಲೆಪತ್ರ ಇರುವುದಿಲ್ಲ. ಆದರೂ ಇವು ಆಯಾ ಆಸ್ತಿದಾರರು ಅನುಭವಿಸಿಕೊಂಡು ಬರುತ್ತಿದ್ದಾರೆ. ಇವುಗಳಲ್ಲಿ ಬಹುತೇಕವು ನಗರದ ಕೋರ್ ಏರಿಯಾದಲ್ಲೇ ಇದ್ದು, ಶತಮಾನದಿಂದ ಕುಂಟುಂಬದ ಸದಸ್ಯರಿಗೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂದಿದೆ. ಆದರೂ, ಇಂತಹವರು ಖಾತಾ ಮಾಡಿಸಿಕೊಂಡಿಲ್ಲ. ಇದು ಕಾನೂನು ದೃಷ್ಟಿಯಲ್ಲಿ ತಪ್ಪಲ್ಲ. ಆದರೆ, ತಾಂತ್ರಿಕ ಕಾರಣದಿಂದ ಬೇರೆಯವರಿಗೆ ಆಸ್ತಿ ಮಾರಾಟ ಮಾಡಬೇಕಾದ ಖಾತಾ ಬೇಕೇ ಬೇಕು. ಹಾಗಾಗಿ ಇಂತಹವರು ಆಸ್ತಿತೆರಿಗೆ, ಆಧಾರ್, ವಿಳಾಸ ದೃಢೀಕರಣ ಸಹಿತ ಕೆಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವುಗಳನ್ನು ಅಧಿಕಾರಿಗಳು ಪರಾಮರ್ಶಿಸಿ ಹೊಸದಾಗಿ ಖಾತೆ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆ ಒಂದೆರಡು ತಿಂಗಳಲ್ಲಿ ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದೆ.
ಖಾಸಗಿಯವರಿಗೂ ವಿತರಣೆ ಹಕ್ಕು?:
ಆಸ್ತಿಗಳ ಖಾತಾ ವರ್ಗಾವಣೆ ಹಾಗೂ ಇ-ಖಾತಾ ವಿತರಿಸುವ ಹೊಣೆಯನ್ನು ಖಾಸಗಿಯವರಿಂದಲೂ ಅನುಷ್ಠಾನಕ್ಕೆ ತರಲು ಪಾಲಿಕೆ ಚಿಂತನೆ ನಡೆಸಿದೆ. ಆನ್‌ಲೈನ್‌ನಿಂದ ಇಂತಹ ಸೌಲಭ್ಯವನ್ನು ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸಲು ಈಗಾಗಲೇ ಬೆಂಗಳೂರು ಒನ್ ಕೇಂದ್ರದಲ್ಲಿ ಜಾರಿಯಲ್ಲಿದೆ. ಇದೇ ರೀತಿ ಸ್ಥಳೀಯ ವ್ಯಕ್ತಿಗಳ (ಎಲ್‌ಪಿಇ) ಮೂಲಕ ವಿತರಿಸುವ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆದು ಮುಂದುವರಿಯಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇ-ಖಾತಾ ಬಗ್ಗೆ ಒಂದಿಷ್ಟು ಮಾಹಿತಿ:
* ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿರುವ ಕರಡು ಇ-ಖಾತಾ - 22 ಲಕ್ಷ
* 2ನೇ ಬಾರಿ ಪರಾಮರ್ಶಿಸಿ ಅಪ್‌ಲೋಡ್‌ಗೆ ಬಾಕಿ ಇರುವುದು - 30 ಸಾವಿರ
* ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಂಡಿರುವವರು - 6 ಲಕ್ಷ
* ಈವರೆಗೆ ಆಸ್ತಿದಾರರಿಗೆ ಅಂತಿಮ ಇ-ಖಾತೆ ವಿತರಿಸಿರುವುದು - 5,324
* ಇ-ಆಸ್ತಿ ವೆಬ್‌ಸೈಟ್ ವೀಕ್ಷಿಸಿರುವ ಸಾರ್ವಜನಿಕರ ಸಂಖ್ಯೆ - 54 ಲಕ್ಷ
ಇ-ಖಾತಾ ವಿತರಣೆಯಲ್ಲಿನ ದೋಷಗಳನ್ನು ನಿವಾರಿಸಿಕೊಂಡು ಜನರಿಗೆ ಸೌಲಭ್ಯ ಒದಗಿಸಲು ಪಾಲಿಕೆ ಶ್ರಮಿಸುತ್ತಿದೆ. ಈಗಾಗಲೇ ವೆಬ್‌ಸೈಟ್‌ನಲ್ಲಿ 22 ಲಕ್ಷ ಆಸ್ತಿಗಳನ್ನು ಅಪ್‌ಲೋಡ್ ಮಾಡಿದ್ದು, ಕರಡು ಇ-ಖಾತಾದಲ್ಲಿನ ತಪ್ಪುಗಳನ್ನು ಸರಿಪಡಿಸಲು ಜನರಿಗೆ ಅವಕಾಶ ನೀಡಲಾಗುವುದು. ಆನಂತರವೇ ಅಂತಿಮ ಇ-ಖಾತ ವಿತರಿಸಲಾಗುವುದು. ಬೆಂಗಳೂರು ಒನ್ ಕೇಂದ್ರಗಳಲ್ಲೂ ಖಾತಾ ಸಂಬಂಧಿತ ಸೌಲಭ್ಯ ಒದಗಿಸಲು ಪಾಲಿಕೆ ಬದ್ಧವಾಗಿದೆ.
- ಮನೀಶ್ ಮೌದ್ಗಿಲ್, ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ ವಿಭಾಗ)