'ಶುಭಾಂಶು ಶುಕ್ಲಾ' ಅವರ ಬಾಹ್ಯಾಕಾಶ ಸಾಧನೆ ಕುರಿತು ಲೋಕಸಭೆಯಲ್ಲಿ ವಿಶೇಷ ಚರ್ಚೆ| iss

shukla
Published on

ನವದೆಹಲಿ; ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಯಶಸ್ವಿಯಾಗಿ ಭೇಟಿ ನೀಡಿದ ಬಳಿಕ ಭಾನುವಾರ ಭಾರತಕ್ಕೆ ಮರಳಿದ ಶುಭಾಂಶು ಶುಕ್ಲಾ ಅವರ ಸಾಧನೆಗಳನ್ನು ಗುರುತಿಸಿ ಶ್ಲಾಘಿಸಲು ಲೋಕಸಭೆ ಇಂದು (ಆ.18) ವಿಶೇಷ ಚರ್ಚೆ ನಡೆಸಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಹೀರೋ ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿ ಕಾರ್ಯಾಚರಣೆಯ ನಂತರ ಮನೆಗೆ ಮರಳಿದ್ದಾರೆ. ಅವರ ಐತಿಹಾಸಿಕ ಮೈಲಿಗಲ್ಲು ಮತ್ತು ನಮ್ಮ ಬಾಹ್ಯಾಕಾಶ ಪ್ರಯಾಣದಲ್ಲಿ ಭಾರತದ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳ ಕುರಿತು ವಿಶೇಷ ಚರ್ಚೆಯೊಂದಿಗೆ ಸಂಸತ್ತು ಅವರನ್ನು ಗೌರವಿಸುತ್ತದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಬಾಹ್ಯಾಕಾಶದ ಯಾತ್ರೆ ಮುಗಿಸಿ, ಭಾರತದ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ ಗಗನಯಾತ್ರಿ ಶುಭಾಂಶು ಶುಕ್ಲಾ ತಾಯ್ನಾಡಿಗೆ ಮರಳಿದ್ದಾರೆ. ಭಾರತಕ್ಕೆ ಬಂದಿಳಿದ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿದೆ. ಅಂದಹಾಗೆ, ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಕ್ಲಾ ಅವರು ಭಾನುವಾರ ಮುಂಜಾನೆ ನವದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಆಗಮಿಸಿದರು. ಅವರನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸ್ವಾಗತಿಸಿದರು. ಭಾರತಕ್ಕೆ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕೂ ಮೊದಲು, ಜೂನ್ 28 ರಂದು ಶುಕ್ಲಾ ಅವರು ಬಾಹ್ಯಾಕಾಶ ಯಾನದ ಸಮಯದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಿದರು. ಇದು 140 ಕೋಟಿ ಭಾರತೀಯರ ಭಾವನೆಗಳು ಮತ್ತು ಉತ್ಸಾಹವನ್ನು ಸಾಕಾರಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಆಕ್ಸಿಯಮ್​-4 ಮಿಷನ್​

ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾರ ಬಳಿಕ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಎರಡನೇ ಭಾರತೀಯನೆಂಬ ದಾಖಲೆ ಸೃಷ್ಟಿಸಿದ್ದಾರೆ. ಈ ಕಾರ್ಯಾಚರಣೆಗೆ ಭಾರತ ಸುಮಾರು 70 ಮಿಲಿಯನ್ ಡಾಲರ್​ ವ್ಯಯಿಸಿದೆ. ಈ ಒಂದು ಐತಿಹಾಸಿಕ ಭೇಟಿಗೆ ನಾಸಾ ಮತ್ತು ಇಸ್ರೋಗೆ ಮಧ್ಯವರ್ತಿಯಾಗಿ ಖಾಸಗಿ ಬಾಹ್ಯಾಕಾಶ ಕಂಪನಿ ಆಕ್ಸಿಯಮ್ ಸ್ಪೇಸ್ ಕೆಲಸ ಮಾಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕಿಂಗ್ ಮಾಡಿದಾಗಿನಿಂದ ಸುಮಾರು 12.2 ಮಿಲಿಯನ್ ಕಿಲೋಮೀಟರ್‌ಗಳನ್ನು ಕ್ರಮಿಸಿ ಭೂಮಿಯ ಸುತ್ತ ಸರಿಸುಮಾರು 433 ಗಂಟೆಗಳು, 18 ದಿನಗಳು ಮತ್ತು 288 ಕಕ್ಷೆಗಳನ್ನು ಸುತ್ತಿದ ಬಳಿಕ ಆಕ್ಸಿಯಮ್ ಮಿಷನ್ 4 (ಆಕ್ಸ್-4) ಸಿಬ್ಬಂದಿ ಮನೆಗೆ ಮರಳಿದರು.

ಅಂದಹಾಗೆ, ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜುಲೈ 15ರಂದು ಭೂಮಿಗೆ ಬಂದಿಳಿದರು. ಆಕ್ಸಿಯಮ್​-4 ಸಿಬ್ಬಂದಿಯನ್ನು ಹೊತ್ತ ಸ್ಪೇಷ್​ ಎಕ್ಸ್​ ಗ್ರೇಸ್​ ಕ್ಪಾಪ್ಸುಲ್​ ಸ್ಯಾನ್​ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಯಶಸ್ವಿಯಾಗಿ ಇಳಿಯಿತು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net