ನಕ್ಸಲರಿಟ್ಟಿದ್ದ ಐಇಡಿ ಸ್ಫೋಟ; ಓರ್ವ ಡಿಆರ್​ಜಿ ಸಿಬ್ಬಂದಿ ಸಾವು, ಮೂವರಿಗೆ ಗಾಯ| IED Blast

Indian Army
Published on

IED Blast: ಛತ್ತೀಸ್​ಗಢದ ಬಿಜಾಪುರದಲ್ಲಿ ಇಂದು ಬೆಳಗ್ಗೆ ನಕ್ಸಲರು ನಡೆಸಿದ ಐಇಡಿ ಸ್ಪೋಟದಲ್ಲಿ ಜಿಲ್ಲಾ ಮೀಸಲು ಪಡೆಯ (ಡಿಆರ್​ಜಿ) ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, ಮೂವರು ಗಾಯಾಗೊಂಡಿದ್ದಾರೆ ಎಂದು ಸೋಮವಾರ (ಆಗಸ್ಟ್ 18) ಅಧಿಕಾರಿಗಳು ತಿಳಿಸಿದ್ದಾರೆ.

ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದ ಒಳಗೆ ಡಿಆರ್‌ಜಿ ತಂಡವು ನಕ್ಸಲ್ ವಿರೋಧಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಲೆ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೃತ ಯೋಧನನ್ನು ದಿನೇಶ್ ನಾಗ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರು ಸಿಬ್ಬಂದಿಗೆ ಸ್ಥಳದಲ್ಲಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ದಟ್ಟ ಅರಣ್ಯ ಪ್ರದೇಶದಿಂದ ಅವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಡಿಆರ್‌ಜಿ ಛತ್ತೀಸ್‌ಗಢ ಪೊಲೀಸರ ವಿಶೇಷ ನಕ್ಸಲ್ ವಿರೋಧಿ ಘಟಕವಾಗಿದ್ದು, ರಾಜ್ಯದ ಸಂಘರ್ಷ ವಲಯಗಳಲ್ಲಿನ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ.

ಆಗಸ್ಟ್ 14ರಂದು ಛತ್ತೀಸ್‌ಗಢದ ಮೊಹ್ಲಾ-ಮನ್‌ಪುರ-ಅಂಬಾಘರ್ ಚೌಕಿ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಒಟ್ಟು 1.16 ಕೋಟಿ ರೂ. ಬಹುಮಾನ ಘೋಷಿಸಲಾಗಿದ್ದ ಇಬ್ಬರು ನಕ್ಸಲ್ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದವು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net