

Arrest: ಉತ್ತರ ಪ್ರದೇಶದ ಮೀರತ್ನ ಟೋಲ್ ಬೂತ್ವೊಂದರಲ್ಲಿ ವಾಗ್ವಾದದಲ್ಲಿ ಭಾರತೀಯ ಸೇನೆಯ ಯೋಧನೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಯ ವಿಡಿಯೋ ವೈರಲ್ ಆದ ಬಳಿಕ ನಾಲ್ವರು ಟೋಲ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ(ಆಗಸ್ಟ್ 18) ವರದಿಯಾಗಿದೆ.
ಕಪಿಲ್ ಕವದ್ ಹಲ್ಲೆಗೊಳಗಾದ ಯೋಧ ಎಂದು ಗುರುತಿಸಲಾಗಿದೆ. ಇವರು ಸೇನೆಯ ರಜಪೂತ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯ ನಿಮಿತ್ತ ಮನೆಗೆ ಬಂದಿದ್ದ ಅವರು ಮತ್ತೆ ಶ್ರೀನಗರದಲ್ಲಿರುವ ತಮ್ಮ ಕಚೇರಿಗೆ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ವೇಳೆ ಜನದಟ್ಟಣೆಯ ಭುನಿ ಟೋಲ್ನಲ್ಲಿ ಕಪಿಲ್ ಮತ್ತು ಅವರ ಸೋದರಸಂಬಂಧಿ ಸಿಲುಕಿಕೊಂಡರು. ವಿಮಾನಕ್ಕೆ ತಡವಾಗುವುದರ ಬಗ್ಗೆ ಆತಂಕಗೊಂಡ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಾರೆ.
ಬಳಿಕ ವಾಗ್ವಾದ ನಡೆದು ಐದು ಟೋಲ್ ಬೂತ್ ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರಸಂಬಂಧಿಯನ್ನು ಥಳಿಸಿದ್ದಾರೆ.ವೀಡಿಯೊದಲ್ಲಿ ಕಪಿಲ್ ಅವರನ್ನು ಕೋಲಿನಿಂದ ಹೊಡೆಯುವುದು ಕಾಣಿಸುತ್ತದೆ. ನಂತರ ದುಷ್ಕರ್ಮಿಗಳು ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ, ಕೈಗಳನ್ನು ಹಿಂದಕ್ಕೆ ಎಳೆದು ನಿಂದಿಸಿ ಥಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮೀರತ್ ಗ್ರಾಮೀಣ ಎಸ್ಪಿ ರಾಕೇಶ್ ಕುಮಾರ್ ಮಿಶ್ರಾ, "ಕಪಿಲ್ ಭಾರತೀಯ ಸೇನೆಯಲ್ಲಿದ್ದಾರೆ. ರಜೆ ಮೇಲೆ ಮನೆಗೆ ಬಂದು ವಾಪಸ್ ತಮ್ಮ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಭುನಿ ಟೋಲ್ ಬೂತ್ನಲ್ಲಿ ಉದ್ದನೆಯ ಸರತಿ ಸಾಲು ಇತ್ತು. ಅವರು ಆತುರದಲ್ಲಿದ್ದರು. ಟೋಲ್ ಸಿಬ್ಬಂದಿಯೊಂದಿಗೆ ಮಾತನಾಡುವ ವೇಳೆ ವಾಗ್ವಾದ ನಡೆದು ಅವರ ಮೇಲೆ ಹಲ್ಲೆ ಆಗಿದೆ. ಕುಟುಂಬದ ದೂರಿನ ಮೇರೆಗೆ ಸರೂರ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊಗಳನ್ನು ಪರಿಶೀಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ಇನ್ನೂ ಎರಡು ತಂಡಗಳು ಕಾರ್ಯನಿರ್ವಹಿಸುತ್ತಿವೆ" ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)