ಮಣ್ಣು ಮನುಕುಲದ ಸ್ವತ್ತು: ಇಂದು ವಿಶ್ವ ಮಣ್ಣು ದಿನ

Soil Day
Published on
| ಡಾ. ಬಿ.ಜಿ. ವಾಸಂತಿ ಹಿರಿಯ ವಿಜ್ಞಾನಿ, ಖುಷ್ಕಿ ಬೇಸಾಯ ಪ್ರಯೋಜನೆ, ಜಿಕೆವಿಕೆ, ಬೆಂಗಳೂರು

ಜಗತ್ತಿನ ಜೀವಸಂಕುಲಕ್ಕೆ ಮಣ್ಣು ಆಧಾರಸ್ತಂಭ. ಬೆಳೆಯ ಉತ್ಪಾದಕತೆ ಮತ್ತು ಗುಣಮಟ್ಟದ ಬೆಳೆಗೆ ಮೂಲಕಾರಣ ಮಣ್ಣು. ನಮ್ಮ ಭೂಮಿಯ ಮಣ್ಣು, ವಾತಾವರಣಕ್ಕಿಂತ ಮೂರು ಪಟ್ಟು ಹೆಚ್ಚು ಇಂಗಾಲವನ್ನು ಹಿಡಿದಿಟ್ಟಿದ್ದು ವೇಗವಾಗಿ ಬದಲಾಗುತ್ತಿರುವ ಹವಾಮಾನ ವೈಪರೀತ್ಯವನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ. ಮಣ್ಣಿನ ಪಾಲನೆ ಮತ್ತು ಪೋಷಣೆ ಮನುಕುಲದ ನೈಜ್ಯ ಕರ್ತವ್ಯ ಹಾಗೂ ಇಂದಿನ ಅಗತ್ಯವಾಗಿದ್ದು, ಪ್ರತಿವರ್ಷ ಡಿ.5ಕ್ಕೆ ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತಿದೆ. ಸುಸ್ಥಿರ ಪ್ರಗತಿಯಲ್ಲಿ ಮಣ್ಣಿನ ಪಾತ್ರದ ಬಗ್ಗೆ ಅರಿವು ಮೂಡಿಸುವುದು, ಸುಸ್ಥಿರ ಮಣ್ಣಿನ ನಿರ್ವಹಣಾ ಚಟುವಟಿಕೆಗಳಲ್ಲಿ ಬಂಡವಾಳ ಹೂಡುವ ಕಾರ್ಯವನ್ನು ಒದಗಿಸುವುದು ಈ ದಿನದ ಮೂಲ ಉದ್ದೇಶವಾಗಿದೆ. ‘ಮಣ್ಣಿನ ಲವಣಾಂಶವನ್ನು ನಿಲ್ಲಿಸುವುದು, ಮಣ್ಣಿನ ಉತ್ಪಾದಕತೆ ಹೆಚ್ಚಿಸುವುದು’ ಈ ವರ್ಷದ ಘೋಷವಾಕ್ಯ. ಇದು ಮಣ್ಣಿನ ಲವಣಾಂಶವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಮಣ್ಣಿನ ಆರೋಗ್ಯ: ಶೇ.95 ನಮ್ಮ ಆಹಾರದ ಮೂಲ ಮಣ್ಣು. ಪ್ರಸ್ತುತ ಸುಮಾರು 82 ಕೋಟಿ ಜನಸಂಖ್ಯೆಗೆ ಆಹಾರ ಭದ್ರತೆ ಇಲ್ಲ. 200 ಕೋಟಿ ಜನ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇದನ್ನು ನೀಗಿಸಲು ಮಣ್ಣಿಗೆ ಮಾತ್ರ ಸಾಧ್ಯ. ಆರೋಗ್ಯವಾಗಿರುವ ಮಣ್ಣಿನಿಂದ ಆರೋಗ್ಯವಂತ ಬೆಳೆ ಸಾಧ್ಯ. ಫಲವತ್ತಾದ ಮೇಲ್ಪದರದ ಮಣ್ಣು ಸವಕಳಿ ಮತ್ತು ಕೊಚ್ಚಣೆಯು, ಮಣ್ಣಿನ ವಿನಾಶಕ್ಕೆ ಒಂದು ಕಾರಣವಾದರೆ ಭೂ ಭಾಗದ ಶೇ.33 ಮಣ್ಣಿನ ಆರೋಗ್ಯವು ಹದಗೆಟ್ಟು ಈಗಾಗಲೆ ಅವನತಿಯ ಅಂಚಿನಲ್ಲಿದೆ. ಜಾಗತೀಕರಣ ಮತ್ತು ಔದ್ಯೋಗಿಕರಣದಿಂದಾಗಿ ಮಣ್ಣು ಮತ್ತು ನೀರಿನ ಮೇಲಿನ ಒತ್ತಡವು ಹೆಚ್ಚುತ್ತಿದೆ. ಕೃಷಿ ವ್ಯವಸ್ಥೆಯು ಸುಸ್ಥಿರವಾಗಿರ ಬೇಕಾದರೆ ನಿರಂತರವಾಗಿ ಮಣ್ಣಿನ ಆರೋಗ್ಯ ವನ್ನು ಕಾಪಾಡಿಕೊಂಡು ಬರಬೇಕು.

ಚೌಳು ಮಣ್ಣು: ಕರ್ನಾಟಕದಲ್ಲಿ ಒಟ್ಟು 1893 ಹೆಕ್ಟೇರ್ ಪ್ರದೇಶದ ಮಣ್ಣು ಚೌಳಾಗಿರುತ್ತದೆ. ಚೌಳು ಮಣ್ಣಿನಲ್ಲಿ ಕಂಡು ಬರುವ ಸಮಸ್ಯೆಗಳೆಂದರೆ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇದ್ದರೂ ಸಸ್ಯಗಳ ಬೇರುಗಳು ನೀರು ಹಾಗೂ ಪೋಷಕಾಂಶ ಹಿರಿಕೊಳ್ಳಲು ಸಾಧ್ಯವಾಗುವುದಿಲ್ಲ. ಬದಲಾಗಿ ಬೇರುಗಳಿಂದಲೇ ನೀರು ಹೊರಹೋಗಿ ಮಣ್ಣನ್ನು ಸೇರುತ್ತದೆ. ಇದರಿಂದ ಸಸ್ಯಗಳು ಬಾಡುತ್ತವೆ. ಸೂಕ್ಷ್ಮ ಜೀವಿಗಳ ಚಟುವಟಿಕೆ ಕಡಿಮೆಯಾಗಿ ಸಾವಯವ ವಸ್ತುಗಳ ಕೊಳೆಯುವಿಕೆ ನಿಧಾನವಾಗಿ ಸಾರಜನಕದ ಕೊರತೆ ಉಂಟಾಗುತ್ತದೆ. ಕ್ಲೋರೈಡ್, ಬೋರಾನ್ ಪೋಷಕಾಂಶಗಳು ಹೆಚ್ಚು ಪ್ರಮಾಣದಲ್ಲಿದ್ದು ನಂಜು ಉಂಟು ಮಾಡುತ್ತವೆ.

ಮಣ್ಣುದಿನದ ಹಿನ್ನೆಲೆ: ಮಣ್ಣಿನ ವಿಜ್ಞಾನಿಗಳ ಅಂತಾರಾಷ್ಟ್ರೀಯ ಒಕ್ಕೂಟ (ಐಯುಎಸ್​ಎಸ್) ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವಿಶ್ವ ಮಣ್ಣು ವಿಜ್ಞಾನದ ಸಮಾವೇಶ ಆಯೋಜಿಸುತ್ತಿದ್ದು, 2002ರಲ್ಲಿ ಥಾಯ್ಲೆಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಸಮಾವೇಶ ಆಯೋಜನೆಗೊಂಡಾಗ ಆ ದೇಶದ ಮಹಾರಾಜ ಭೂಮಿಬೊಲ್ ಅದುಲ್ಯದೇಜ್ ಅವರಾಗಿದ್ದರು. ಇವರಿಗೆ ಮಣ್ಣಿನ ಬಗ್ಗೆ ಇದ್ದ ಅಪಾರ ಕಾಳಜಿ ಅವರು ಕೈಗೊಂಡ ಅನೇಕ ಯೋಜನೆ ಹಾಗೂ ಕಾರ್ಯಚಟುವಟಿಕೆಯಲ್ಲಿ ಪ್ರತಿಫಲನಗೊಂಡಿದ್ದವು. ಅವರ ಕೊಡುಗೆಯನ್ನು ಗೌರವಿಸಲು ಅವರ ಜನ್ಮದಿನವಾದ ಡಿ.5ನ್ನು ವಿಶ್ವ ಮಣ್ಣು ದಿನ ಎಂದು ಆಚರಿಸಲಾಗುತ್ತಿದೆ. 2013ರಲ್ಲಿ ವಿಶ್ವ ಸಂಸ್ಥೆಯು ವಿಶ್ವ ಮಣ್ಣು ದಿನಾಚರಣೆಗೆ ಸಮ್ಮತಿ ಸೂಚಿಸಿತು. 2014ರಿಂದ ಮಣ್ಣುದಿನ ಆಚರಿಸಲಾಗುತ್ತಿದೆ.

ಗುರುತಿಸುವುದು ಹೇಗೆ?: ಚೌಳು ಭೂಮಿ ಮೇಲ್ನೋಟಕ್ಕೆ ಬಿಳಿ ಬಣ್ಣದ ಲವಣಗಳ ಪದರಗಳಿಂದ ಕೂಡಿದೆ. ಮಣ್ಣು ಸುಣ್ಣವಾಗಿರುತ್ತದೆ. ಬರಿಗಾಲಿನಿಂದ ನಡೆದಾಗ ತಂಪು ಅನುಭವವಾಗುತ್ತದೆ. ಆದರೆ ಮಣ್ಣಿನ ಕಣರಚನೆ ಹದಗೆಟ್ಟಿರುವುದಿಲ್ಲ. ಒಂದು ಜಮೀನಿನ ಮಣ್ಣು ನಿಖರವಾಗಿ ಚೌಳುಮಣ್ಣು ಎಂದು ಹೇಳಬೇಕಾದರೆ ಮಣ್ಣಿನ ಪರೀಕ್ಷೆ ಮಾಡಬೇಕಾಗುತ್ತದೆ. ಚೌಳು ಮಣ್ಣಿನ ರಸಸಾರವು 8.5ಕ್ಕಿಂತ ಕಡಿಮೆಯಿರುತ್ತದೆ.

ಸುಧಾರಣೆ ಹೇಗೆ?: ಚೌಳು ಮಣ್ಣಿನ ಸುಧಾರಣೆಗೆ ಜಮೀನಿನಲ್ಲಿ ನಿಗದಿತ ಅಂತರದಲ್ಲಿ ಬಸಿಗಾಲುವೆ ತೋಡಬೇಕು. ಉತ್ತಮ ಮಟ್ಟದ ನೀರಿನಲ್ಲಿ ಲವಣಗಳನ್ನು ಕರಗಿಸಿ ಬಸಿಗಾಲುವೆಗಳ ಮೂಲಕ ತೆಗೆಯಬೇಕು. ಭೂಮಿಯನ್ನು ಸಮತಟ್ಟು ಮಾಡಬೇಕು. ಭೂಮಿಯ ಮೇಲ್ಪದರದ ಬಿಳಿಪುಡಿಯನ್ನೊಳಗೊಂಡ ಮಣ್ಣನ್ನು 2.5 ರಿಂದ 4 ಸೆಂ.ಮೀ.ವರೆಗೆ ತೆಗೆದು ಸಾಗಿಸಬೇಕು. ಭೂಮಿಯನ್ನು ಸಡಿಲಗೊಳಿಸಿ, ಅದರ ರಾಸಾಯನಿಕ ಮತ್ತು ಜೈವಿಕ ಕ್ರಿಯೆಗಳನ್ನು ಹೆಚ್ಚಿಸಲು, ಹಸಿರೆಲೆ ಬೆಳೆಗಳಾದ ಸೆಣಬು/ಚೆಂಬೆ ಬೆಳೆದು ಅವು ಹೂ ಬಿಡುವ ಸಮಯದಲ್ಲಿ ಕಟಾವು ಮಾಡಿ ಅದೇ ಭೂಮಿಯಲ್ಲಿ ಸೇರಿಸಬೇಕು. ಒಂದು ತಿಂಗಳ ನಂತರ ಲವಣ ಸಹಿಷ್ಣುತೆ ಹೊಂದಿರುವ ಬೆಳೆಗಳನ್ನು ಆಯ್ಕೆ ಮಾಡಿ ಬೆಳೆಯಬೇಕು. ಪ್ರಾರಂಭದಲ್ಲಿ ಭತ್ತದ ಬೇಸಾಯ ಸೂಕ್ತ. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬೆಳೆಗೆ ಅನುಗುಣವಾಗಿ ಸೂಕ್ತವಾದ ರಾಸಾಯನಿಕ ಗೊಬ್ಬರ ಬಳಸಬೇಕು. ಲವಣ ಸಹಿಷ್ಣುತೆ/ ನಿರೋಧಕತೆ ಇರುವ ಬೆಳೆಗಳನ್ನು ಬೆಳೆಯಬೇಕು.

ಸಹಿಷ್ಣುತೆ: ಗೋದಿ, ಬಾರ್ಲಿ, ತೆಂಗು, ಪೇರಲ ಅಸಹಿಷ್ಣುತೆ: ಉದ್ದು, ಹೆಸರು, ಕಡಲೆ, ಬಟಾಣೆ, ಬೆಂಡೆ, ಅಲಸಂದೆ ಇತ್ಯಾದಿ ಅರೆ ಸಹಿಷ್ಣುತೆ: ಭತ್ತ, ಜೋಳ, ಕಬ್ಬು, ಹತ್ತಿ, ಈರುಳ್ಳಿ, ಮಾವು

ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲಿನ ಜನಸಂಖ್ಯೆಯು ತೀವ್ರತೆ ಏರುತ್ತಿದೆ. ಮಣ್ಣು ಸಂಬಂಧಿ ಸಮಸ್ಯೆಗಳಿಂದ ಉತ್ಪಾದಕತೆ ಗಣನೀಯವಾಗಿ ತಗ್ಗುತ್ತಿದೆ. ಇದರಿಂದ ಆಹಾರ ಭದ್ರತೆ ಇಲ್ಲದಂತಾಗಿದೆ. ನಾವು ಎಚ್ಚರಗೊಳ್ಳದಿದ್ದರೆ ಒಂದು ದಿನ ಎಲ್ಲರೂ ಹಸಿವಿನಿಂದ ಜೀವ ಬಿಡಬೇಕಾದೀತು! ಆದ್ದರಿಂದ ಇದೊಂದು ಸಾಧಾರಣ ವಿಷಯವೆಂದು ಭಾವಿಸದೆ ರೈತ ಮಾತ್ರವಲ್ಲದೆ ಸಮಾಜದ ಪ್ರತಿ ವ್ಯಕ್ತಿಯೂ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕು.

(ಪೂರಕ ಮಾಹಿತಿ: ಡಾ. ಸಿ.ಎ. ಶ್ರೀನಿವಾಸಮೂರ್ತಿ, ನಿವೃತ್ತ ಪ್ರಾಧ್ಯಾಪಕರು, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಜಿಕೆವಿಕೆ, ಬೆಂಗಳೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net