ಬರ್ರೀ ರೊಟ್ಟಿ ಊಟ ಮಾಡೋಣು!

ಜೋಳದ ರೊಟ್ಟಿ
Published on

ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿಯಲ್ಲಿ ಜೋಳದ ರೊಟ್ಟಿಗೆ ಮೊದಲ ಸ್ಥಾನ. ಬಿಸಿ ರೊಟ್ಟಿ, ಪಲ್ಯ, ಖಡಕ್ ರೊಟ್ಟಿ, ಚಟ್ನಿಯ ರುಚಿ ನಿಜಕ್ಕೂ ಅಸಾಧಾರಣ. ರೊಟ್ಟಿ ತಟ್ಟುವುದಕ್ಕೂ ಒಂದು ಲಯವಿದೆ, ಕ್ರಮವಿದೆ. ಹಾಗಾಗಿಯೇ, ರೊಟ್ಟಿ ತಟ್ಟುವಿಕೆಯ ಸದ್ದು ಕೂಡ ಕಿವಿಗೆ ಯಾವುದೋ ಸಂಗೀತ ಪರಿಕರದ ತರಂಗಗಳಂತೆ ಕೇಳಿಸುತ್ತದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ವಿಜಯನಗರ, ಗದಗ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಈ ಎಲ್ಲ ಜಿಲ್ಲೆಗಳಲ್ಲಿ ಊಟವೆಂದರೆ ಅದು ರೊಟ್ಟಿ ಊಟವೇ ಆಗಬೇಕು. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಎರಡೂ ಭಾಗಗಳಲ್ಲಿ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದ ಇಲ್ಲಿಯ ಆಹಾರ ಪದ್ಧತಿಯಾಗಿ ವಿಶಿಷ್ಟ ಸ್ಥಾನ ಅಲಂಕರಿಸಿರುವ ಜೋಳದ ರೊಟ್ಟಿ ಇತರ ಭಾಗಗಳ ಜನರ ತಟ್ಟೆಯಲ್ಲೂ ಪ್ರಮುಖ ಸ್ಥಾನ ಪಡೆಯುತ್ತಿರುವುದು ಗಮನಾರ್ಹ. ಆತಿಥ್ಯದ ಭಾಗವಾಗಿ ಇತ್ತೀಚೆಗೆ ಮದುವೆ ಊಟದ ಮೆನುವಿನಲ್ಲಿಯೂ ರೊಟ್ಟಿ ಪ್ರಮುಖ ಸ್ಥಾನ ಪಡೆದಿದ್ದು, ‘ಬರ್ರೀ ರೊಟ್ಟಿ ಊಟ ಮಾಡೋಣು’ ಎಂದು ಹೇಳುತ್ತ ಹೊಟ್ಟೆ ತಣ್ಣಗಾಗಿಸುವ ಜತೆಗೆ, ಮನುಷ್ಯ ಸಂಬಂಧಗಳೂ ಗಟ್ಟಿಯಾಗುತ್ತವೆ.

ಆರೋಗ್ಯಕ್ಕೆ ಪೂರಕ: ಪೌಷ್ಟಿಕಾಂಶಗಳನ್ನು ಹೊಂದಿರುವ ಜೋಳದ ರೊಟ್ಟಿಯಲ್ಲಿ ನಾರಿನ ಅಂಶ ಹೆಚ್ಚು. ಹಾಗಾಗಿ, ಇದು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಅನುಕೂಲಕರ. ದೇಹದಲ್ಲಿ ಬೇಡದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಡೆದು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡುತ್ತದೆ. ಜೋಳ ತನ್ನಲ್ಲಿ ಅಗತ್ಯವಾದ ಖನಿಜಾಂಶಗಳನ್ನು ಒಳಗೊಂಡಿದ್ದು, ಪೊಟಾಸಿಯಂ ರಕ್ತದ ಒತ್ತಡದ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗ್ಲೂಟನ್ ಮುಕ್ತವಾದ ಜೋಳ ಸೇವನೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುತ್ತಾರೆ ಆಹಾರ ತಜ್ಞರು. ಹಾಗಾಗಿಯೇ, ‘ಜೋಳ ತಿಂದವನು ತೋಳ’ ಎಂಬ ಮಾತು ಪ್ರಚಲಿತದಲ್ಲಿದೆ.

ಖಡಕ್ ರೊಟ್ಟಿ: ಪ್ರವಾಸದ ಸಂದರ್ಭದಲ್ಲಿ ಜತೆಗೆ ತೆಗೆದುಕೊಂಡು ಹೋಗಲು ಅಥವಾ ಬ್ಯಾಚಲರ್​ಗಳು ಸಂಗ್ರಹಿಸಿಟ್ಟುಕೊಳ್ಳಲು ಖಡಕ್ ರೊಟ್ಟಿಗಿಂತ ಉತ್ತಮ ಆಯ್ಕೆಯಿಲ್ಲ. ಏಕೆಂದರೆ, ಖಡಕ್ ರೊಟ್ಟಿಗಳು ಕನಿಷ್ಠ 25-30 ದಿನಗಳಾದರೂ ಹಾಳಾಗುವುದಿಲ್ಲ. ಯಾವುದೋ ಪಲ್ಯ, ಚಟ್ನಿ, ಝುುಣಕಾ ಜತೆಗೆ ಖಡಕ್ ರೊಟ್ಟಿ ಸವಿಯುತ್ತಿದ್ದರೆ ಗ್ರಾಮೀಣ ಜೀವನದ ನೆನಪುಗಳು ಆವರಿಸಿಕೊಂಡು, ಪುಳಕ ಮೂಡಿಸುತ್ತವೆ.

ಸ್ವಾವಲಂಬನೆಯ ಮಂತ್ರ: ರೊಟ್ಟಿ ತಯಾರಿಕೆ ಮತ್ತು ಮಾರಾಟ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಹೆಚ್ಚೇನು ಶಿಕ್ಷಣ ಪಡೆಯದ ಹೆಣ್ಣುಮಕ್ಕಳು ಸಹ ರೊಟ್ಟಿ ತಟ್ಟುತ್ತ, ಕುಟುಂಬದ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ. ಒಂದು ಸಣ್ಣ ರೊಟ್ಟಿ ಕೇಂದ್ರವು ಕನಿಷ್ಠ ನಾಲ್ಕೈದು ಮಹಿಳೆಯರಿಗೆ ಕೆಲಸ ನೀಡಿದರೆ, ಬೃಹತ್ ಕೇಂದ್ರಗಳಂತೂ ನೂರಾರು ಮಹಿಳೆಯರಿಗೆ ಉದ್ಯೋಗ ಒದಗಿಸಿವೆ. ಜೋಳದ ರೊಟ್ಟಿ ಊಟದ ಖಾನಾವಳಿಗಳು ಹೆಚ್ಚುತ್ತಿವೆ. ಅವುಗಳಲ್ಲಿ ಮಹಿಳೆಯರು ರೊಟ್ಟಿ ತಟ್ಟುವ ಶೈಲಿಯನ್ನು ನೋಡುವುದೇ ಸಂಭ್ರಮ. ಮೃದು, ಖಡಕ್ ರೊಟ್ಟಿಯ ಜತೆಗೆ ಸಜ್ಜೆ ರೊಟ್ಟಿ, ಧಪಾಟಿ, ಶೇಂಗಾ ಹೋಳಿಗೆ, ಖೋವಾ ಹೋಳಿಗೆ, ಶೇಂಗಾ ಚಟ್ನಿ (ಸ್ಥಳೀಯ ಭಾಷೆಯಲ್ಲಿ ಹಿಂಡಿ), ಬಾನದ ಹಿಟ್ಟು, ಅಗಸಿ ಹಿಂಡಿ ಮತ್ತು ಜೋಳದ ರೊಟ್ಟಿಯಿಂದ ಮಾಡುವ ಮುಟಗಿಗೆ ಭಾರಿ ಬೇಡಿಕೆ ಇದ್ದು, ಮಾರಾಟ ಪ್ರಮಾಣ ಹೆಚ್ಚುತ್ತಿದೆ. ಕಲಬುರಗಿ, ವಿಜಯಪುರ, ಧಾರವಾಡ-ಹುಬ್ಬಳ್ಳಿಯಲ್ಲಿ ನೂರಾರು ರೊಟ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ತಯಾರಾಗುವ ರೊಟ್ಟಿಗಳು ದೇಶದ ಇತರೆಡೆಗೆ ಮತ್ತು ವಿದೇಶಗಳಿಗೂ ರಫ್ತಾಗುತ್ತಿವೆ.

ಬೆಂಗಳೂರಿನಲ್ಲೂ ಭಾರಿ ಬೇಡಿಕೆ: ಮೊದಮೊದಲು ರೊಟ್ಟಿ ಕೇಂದ್ರಗಳು ಉತ್ತರ ಕರ್ನಾಟಕಕ್ಕೆ ಸೀಮಿತವಾಗಿದ್ದವು. ಆದರೆ, ಕಳೆದ ಕೆಲ ವರ್ಷಗಳಿಂದ ರಾಜಧಾನಿ ಬೆಂಗಳೂರಿನ ಬಹುತೇಕ ಪ್ರತಿ ಬಡಾವಣೆಗಳಲ್ಲೂ ರೊಟ್ಟಿ ಕೇಂದ್ರಗಳು ವ್ಯಾಪಾರ ನಡೆಸುತ್ತಿವೆ. ಜೋಳದ ರೊಟ್ಟಿ ಊಟವನ್ನೇ ನೀಡುವ ಪ್ರತಿಷ್ಠಿತ ಹೋಟೆಲ್​ಗಳು, ಖಾನಾವಳಿಗಳ ವಹಿವಾಟು ಅಚ್ಚರಿ ಮೂಡಿಸುತ್ತದೆ. ಬೆಂಗಳೂರೊಂದರಲ್ಲೇ ರೊಟ್ಟಿ ಊಟದ 500ಕ್ಕೂ ಹೆಚ್ಚು ಹೋಟೆಲ್ ಮತ್ತು ಖಾನಾವಳಿಗಳಿವೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಇವುಗಳ ಸಂಖ್ಯೆ ಹೆಚ್ಚು.

ಇ-ಕಾಮರ್ಸ್​ಗೆ ಪ್ರವೇಶ...: ಜೋಳದ ರೊಟ್ಟಿ ಬೇಕೆಂದರೆ ಈಗ ರೊಟ್ಟಿ ಕೇಂದ್ರಗಳನ್ನೇ ಹುಡುಕಿ ಹೋಗಬೇಕಿಲ್ಲ. ಅಮೆಜಾನ್, ಫ್ಲಿಪ್​ಕಾರ್ಟ್​ನಂಥ ಇ-ಕಾಮರ್ಸ್ ತಾಣಗಳಲ್ಲೂ ಈಗ ರೊಟ್ಟಿ ಲಭ್ಯ. ಒಂದು ಕ್ಲಿಕ್ಕಿನಲ್ಲಿ ಅವು ಗ್ರಾಹಕರ ಮನೆಬಾಗಿಲಿಗೆ ತಲುಪುತ್ತವೆ. ‘ಕಲಬುರಗಿ ರೊಟ್ಟಿ’ ಎಂಬ ಬ್ರಾ್ಯಂಡ್ ಕೂಡ ಇತ್ತೀಚೆಗೆ ಬಿಡುಗಡೆಯಾಗಿದೆ.

ವೈಶಿಷ್ಟ್ಯಗಳು...

  • ಆಹಾರ ಸಂಸ್ಕೃತಿಯ ಸೊಗಡನ್ನು ವಿಸ್ತರಿಸುತ್ತಿರುವ ಜೋಳದ ರೊಟ್ಟಿಗೆ ಜಾತ್ರೆಗಳಲ್ಲೂ ಅಗ್ರ ಸ್ಥಾನ. ಪ್ರತಿವರ್ಷ ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮಹಿಳೆಯರು ಹಲವು ಲಕ್ಷ ರೊಟ್ಟಿಗಳನ್ನು ತಯಾರಿಸುತ್ತಾರೆ.
  • ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನಾಗರಪಂಚಮಿಯಲ್ಲಿ ರೊಟ್ಟಿ ಪಂಚಮಿಯನ್ನೂ ಆಚರಿಸುತ್ತಾರೆ. ನೆರೆಹೊರೆಯವರು ಮನೆಮನೆಗೆ ಹೋಗಿ ರೊಟ್ಟಿ ವಿನಿಮಯ ಮಾಡಿಕೊಳ್ಳುತ್ತಾರೆ.
  • ಕಡಿಮೆ ಬಂಡವಾಳದಲ್ಲಿ ಮನೆಯ ಸದಸ್ಯರೇ ಸೇರಿ ರೊಟ್ಟಿ ಕೇಂದ್ರಗಳನ್ನು ನಡೆಸುವ ಪರಿಪಾಠ ಹೆಚ್ಚುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net