ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎರಡು ದೋಣಿಯಲ್ಲಿ ಕಾಲಿಟ್ಟ ಬಿಜೆಪಿ!

Bihar Election
Published on

| ರಾಘವ ಶರ್ಮ ನಿಡ್ಲೆ, ನವದೆಹಲಿ

ಮೂರು ಹಂತಗಳ ವಿಧಾನಸಭೆ ಚುನಾವಣಾ ಸಮರಕ್ಕೆ ಸಜ್ಜಾಗಿ ರುವ ಬಿಹಾರದಲ್ಲಿ ತುರುಸು ಜೋರಾಗಿದೆ. ಕರೊನೋತ್ತರ ಕಾಲದ ಮೊದಲ ವಿಧಾನಸಭಾ ಚುನಾವಣೆ ಇದಾಗಿರುವುದರಿಂದ ಆಡಳಿತಾ ರೂಢ ಬಿಜೆಪಿ ಮತ್ತು ಜೆಡಿಯು ಬಗ್ಗೆ ರಾಜ್ಯದ ಜನಾಭಿಪ್ರಾಯವೇನು ಎಂಬುದೂ ಫಲಿತಾಂಶ ನಂತರ ಗೊತ್ತಾಗಲಿದೆ.

ಎನ್​ಡಿಎ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ನಾಯಕರು. ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಲೋಕಜನಶಕ್ತಿ ಪಾರ್ಟಿ (ಎಲ್​ಜೆಪಿ) ರಾಜ್ಯ ಚುನಾವಣೆಯಲ್ಲಿ ಮಾತ್ರ ಮೈತ್ರಿಕೂಟ ಹೊರಗಿದ್ದು ಚುನಾವಣೆ ಎದುರಿಸುತ್ತಿದೆ. ಹಾಗಂತ ಅವರು ಬಿಜೆಪಿ ವಿರೋಧಿಸುತ್ತಿಲ್ಲ. ಜೆಡಿಯು ಮುಖಂಡರೊಂದಿಗೆ (ಮುಖ್ಯವಾಗಿ ನಿತೀಶ್ ಕುಮಾರ್) ಅಂತರ ಕಾಯ್ದುಕೊಂಡಿರುವ ಎಲ್​ಜೆಪಿ ನಾಯಕ ಚಿರಾಗ್ ಪಾಸ್ವಾನ್, ತೆರೆಮರೆಯಲ್ಲಿ ಬಿಜೆಪಿ ಬೆಂಬಲ ಪಡೆದೇ ಜೆಡಿಯು ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ.

28ರಂದು ಮೊದಲ ಹಂತದ ಮತದಾನ ನಡೆಯುವ 42 ಕ್ಷೇತ್ರಗಳಲ್ಲಿ ಜೆಡಿಯುನ ಎಲ್ಲಾ ಅಭ್ಯರ್ಥಿಗಳ ವಿರುದ್ಧ ಎಲ್​ಜೆಪಿ ಸ್ಪರ್ಧಿಸುತ್ತಿದೆ. ಹಾಗೆಯೇ ಎನ್​ಡಿಎ ಮೈತ್ರಿಕೂಟದ ಮತ್ತೊಂದು ಪಾಲುದಾರ ಪಕ್ಷ ಮಾಜಿ ಸಿಎಂ ಜೀತನ್ ರಾಮ್ ಮಾಂಜಿ ನೇತೃತ್ವದ ಹಿಂದುಸ್ತಾನಿ ಅವಾಮಿ ಮೋರ್ಚಾ (ಎಚ್​ಎಎಂ) ವಿರುದ್ಧವೂ ಎಲ್​ಜೆಪಿ ಕಣಕ್ಕಿಳಿಯುತ್ತಿದೆ. ಜೆಡಿಯು ತನ್ನ ಪಾಲಿನ 122 ಕ್ಷೇತ್ರಗಳಲ್ಲಿ ಎಚ್​ಎಎಂಗೂ ಸೀಟುಗಳನ್ನು ಬಿಟ್ಟುಕೊಡಬೇಕಿದೆ. ಹಾಗೆಯೇ, ಎನ್​ಡಿಎ ಜತೆಗಿರುವ ವಿಕಾಸ್​ಶೀಲ್ ಇನ್ಸಾನ್ ಪಾರ್ಟಿಗೆ ಬಿಜೆಪಿ ತನ್ನ ಪಾಲಿನ ಸೀಟುಗಳಲ್ಲಿ ಹಂಚಿಕೆ ಮಾಡಬೇಕಿದೆ. ನಿತೀಶ್ ಕುಮಾರ್ ನಾಯಕತ್ವವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಆದರೆ, ತೆರೆಮರೆಯಲ್ಲಿ ಬಿಜೆಪಿ ಬೇರೆಯದೇ ಲೆಕ್ಕಾಚಾರ ಹಾಕಿಕೊಂಡಿದೆಯೇ? ಎಲ್​ಜೆಪಿಯನ್ನು ಮುಂದಿಟ್ಟು ಕೊಂಡು ಜೆಡಿಯು ಸೀಟುಗಳನ್ನು ತಗ್ಗಿಸುವುದು ಬಿಜೆಪಿ ಪ್ಲಾನ್-ಬಿ ಇರಬಹುದೇ? ರಾಜ್ಯ ರಾಜಕಾರಣದಲ್ಲಿ ಜೆಡಿಯು ಪ್ರಭಾವ ಕುಗ್ಗಿಸಬೇಕೆಂಬ ಉದ್ದೇಶ ಬಿಜೆಪಿಯಲ್ಲಿದೆಯೇ ಎಂಬೆಲ್ಲಾ ಪ್ರಶ್ನೆಗಳು ಅನೇಕರನ್ನು ಕಾಡುತ್ತಿದೆ. ಈಗ ನಿತೀಶ್ ಕುಮಾರ್ ವಿರೋಧಿ ಅಲೆ ಇರುವ ಬಗ್ಗೆ ಜೆಡಿಯು ನಾಯಕರೇ ಮಾತನಾಡಿಕೊಳ್ಳುತ್ತಿರುವುದು ಸುಳ್ಳೇನಲ್ಲ. ಈ ವಿರೋಧಿ ಅಲೆ ಜೆಡಿಯುಗೆ ಹೆಚ್ಚು ಬಾಧಿಸಲಿದ್ದು, ಬಿಜೆಪಿಗೆ ಹಾನಿ ಮಾಡದು ಎಂದು ಬಿಜೆಪಿ ನಾಯಕರು ನಂಬಿದ್ದಾರೆ. ಹೀಗಾಗಿಯೇ, ಎಲ್​ಜೆಪಿ ಮೂಲಕ ಜೆಡಿಯು ಬುಡಕ್ಕೆ ಹಾನಿ ಮಾಡಿ, ಅತ್ಯಧಿಕ ಸೀಟುಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದರೆ ಸಿಎಂ ಸ್ಥಾನ ತನಗೇ ಎಂದು ಬಿಜೆಪಿ ಭಾವಿಸಿದಂತಿದೆ. ತಂದೆ ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ತೆರವಾಗಿರುವುದರಿಂದ ಅಲ್ಲಿ ಸಚಿವ ಸ್ಥಾನದ ಜತೆಗೆ ರಾಜ್ಯದಲ್ಲಿ ಡಿಸಿಎಂ ಹುದ್ದೆ ಮೇಲೆ ಚಿರಾಗ್ ಪಾಸ್ವಾನ್ ಕಣ್ಣಿಟ್ಟಿದ್ದಾರೆ. ಕೇಂದ್ರದಲ್ಲಿರುವಂತೆ, ಬಿಹಾರದಲ್ಲೂ ಬಿಜೆಪಿ ಎನ್​ಡಿಎ ಮೈತ್ರಿಕೂಟ ಮುನ್ನಡೆಸಬೇಕು ಎಂಬ ಆಶಯಕ್ಕೆ ಪೂರಕವಾಗಿಯೇ ಚಿರಾಗ್ ರಾಜಕೀಯ ಹೆಜ್ಜೆಗಳನ್ನಿಡುತ್ತಿದ್ದಾರೆ.

ತಮ್ಮ ವಿರುದ್ಧ ಅಭ್ಯರ್ಥಿ ಹಾಕಿರುವ ಎಲ್​ಜೆಪಿ ನಡೆಯನ್ನು ವಿರೋಧಿಸದ ಬಿಜೆಪಿ ಬಗ್ಗೆ ಜೆಡಿಯು ಮುಖಂಡರು ಒಳಗೊಳಗೇ ಕುದಿಯುತ್ತಿದ್ದಾರೆ. ಎಲ್​ಜೆಪಿಯಿಂದಾಗಿ ಜೆಡಿಯುಗೆ ಬಹುಪಾಲು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಯ ಸವಾಲಿದೆ. ಬಿಜೆಪಿಯು ಕಾಂಗ್ರೆಸ್-ಆರ್​ಜೆಡಿ ಮೈತ್ರಿ ಅಭ್ಯರ್ಥಿ ವಿರುದ್ಧ ನೇರಾನೇರ ಸ್ಪರ್ಧೆಗೆ ತೆರೆದುಕೊಳ್ಳುತ್ತಿದೆ. ಜೆಡಿಯುಗೆ ಹಾನಿ ಮಾಡಲಿರುವ ಮತ ವಿಭಜನೆಯ ತಲೆನೋವು ಬಿಜೆಪಿಗಿದ್ದಂತಿಲ್ಲ. ಎಲ್​ಜೆಪಿ ಕಾರಣದಿಂದಾಗಿಯೇ ತನ್ನ ಸೀಟುಗಳ ಸಂಖ್ಯೆ ಕಡಿಮೆಯಾದಲ್ಲಿ, ಚುನಾವಣೋತ್ತರ ಸನ್ನಿವೇಶದಲ್ಲಿ ಜೆಡಿಯು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು.

ಬಿಹಾರದಲ್ಲಿ ಎಲ್​ಜೆಪಿ ಸಣ್ಣ ಪಕ್ಷವಾಗಿದ್ದರೂ, ದೊಡ್ಡಪಕ್ಷಗಳ ಬೆನ್ನುಮೂಳೆ ಮುರಿದಿರುವ ಇತಿಹಾಸ ಹೊಂದಿದೆ. 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಲ್ಲಿದ್ದರೂ, ಲಾಲು ಪ್ರಸಾದ್ ಯಾದವ್ ನಾಯಕತ್ವದ ರಾಷ್ಟ್ರೀಯ ಜನತಾದಳದ (ಆರ್​ಜೆಡಿ) 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಬೇಕೆಂದೇ ಎಲ್​ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದರು. ಹೆಚ್ಚು ಸೀಟುಗಳನ್ನು ಗೆಲ್ಲದಿದ್ದರೂ, ಆರ್​ಜೆಡಿಯ ನಿರ್ಣಾಯಕ ವೋಟುಗಳನ್ನು ವಿಭಜಿಸುವಲ್ಲಿ ಪಾಸ್ವಾನ್ ಯಶಸ್ವಿಯಾಗಿದ್ದರು. ಇದರಿಂದಾಗಿ, 2005ರಲ್ಲಿ ನಿತೀಶ್ ನೇತೃತ್ವದ ಬಿಜೆಪಿ-ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೇರಿತ್ತು. ಈಗಲೂ ಇಂಥದ್ದೇ ಲೆಕ್ಕಾಚಾರದೊಂದಿಗೆ ಎಲ್​ಜೆಪಿ ಕಣಕ್ಕಿಳಿದಿದೆ. ಜೆಡಿಯು ವಿರುದ್ಧ ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಬೇಕೆನ್ನುವುದು ಚಿರಾಗ್ ಯೋಚನೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೂ ಬಳಸಿಕೊಳ್ಳುತ್ತಿದ್ದಾರೆ.

2014ರಲ್ಲಿ ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೊಷಿಸಿದ್ದರಿಂದ ನಿತೀಶ್ ಎನ್​ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದರು. ಈ ಬೆಳವಣಿಗೆ 2014ರಲ್ಲಿ ಎಲ್​ಜೆಪಿ ಎನ್​ಡಿಎ ಸೇರಿಕೊಳ್ಳಲೂ ಒಂದು ಕಾರಣವಾಯಿತು. ಅಲ್ಲದೆ ಮೋದಿ ಅಲೆಯಿಂದ ಎಲ್​ಜೆಪಿ 6 ಲೋಕಸಭೆ ಸೀಟುಗಳನ್ನು ಗೆದ್ದುಕೊಂಡಿತು. ಆದರೆ, 2017ರಲ್ಲಿ ನಿತೀಶ್ ಮತ್ತೆ ಎನ್​ಡಿಎ ಮೈತ್ರಿಕೂಟಕ್ಕೆ ವಾಪಸಾಗಿ, ಸಿಎಂ ಸ್ಥಾನದಲ್ಲಿ ಮುಂದುವರಿದರು. ರಾಜ್ಯ ವಿಧಾನಸಭೆಯಲ್ಲಿ ಎರಡೇ ಸ್ಥಾನಗಳಿದ್ದರೂ, ನಿತೀಶ್​ರಿಂದಾಗಿ ಎಲ್​ಜೆಪಿಗೆ ಮಿತ್ರಪಕ್ಷ ಎನ್ನುವ ಕನಿಷ್ಠ ಗೌರವವೂ ಸಿಗುತ್ತಿಲ್ಲ ಎಂದು ರಾಮ್ ವಿಲಾಸ್, ಚಿರಾಗ್ ಪಾಸ್ವಾನ್ ಬಿಜೆಪಿ ನಾಯಕರ ಮುಂದೆ ಅತೃಪ್ತಿ ಹೊರಹಾಕುತ್ತಲೇ ಇದ್ದರು. ಹಾಲಿ ಚುನಾವಣೆಯಲ್ಲಿ ನಿತೀಶ್​ಗೆ ಬುದ್ಧಿ ಕಲಿಸಲೇಬೇಕೆಂದು ಯುವಕ ಚಿರಾಗ್ ಪಾಸ್ವಾನ್ ಪಣತೊಟ್ಟಿದ್ದಾರೆ. ಇವೆಲ್ಲವನ್ನೂ ದೂರದಲ್ಲಿ ನಿಂತು ಗಮನಿಸುತ್ತಿರುವ ಬಿಜೆಪಿ ಎರಡು ದೋಣಿಯಲ್ಲಿ ಕಾಲಿಡುವ ಮೂಲಕ, ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬೇಕೆಂಬ ಮಹತ್ವಾಕಾಂಕ್ಷೆ ಹೊಂದಿ, ಇಬ್ಬರ ಜಗಳದಲ್ಲಿ ತನಗೆಷ್ಟು ಲಾಭವಾದೀತು ಎಂಬ ಯೋಚನೆಯಲ್ಲಿದೆ. ಎನ್​ಡಿಎ ಮೈತ್ರಿಕೂಟದೊಳಗಿನ ಈ ಒಳಜಗಳವೇ ಆರ್​ಜೆಡಿ-ಕಾಂಗ್ರೆಸ್ ಮೈತ್ರಿಗೆ ಲಾಭವಾದರೂ ಅಚ್ಚರಿಯಿಲ್ಲ.

ನಿತೀಶ್ ವಿರುದ್ಧ ಮುನಿಸೇಕೆ?

ಎಲ್​ಜೆಪಿ ನಾಯಕರು ನಿತೀಶ್ ವಿರುದ್ಧ ಕಾರ್ಯನೀತಿ ರೂಪಿಸಲು ಹಲವು ಕಾರಣಗಳುಂಟು. 2005ರಿಂದ 2020ರ ತನಕದ ಅಧಿಕಾರಾವಧಿಯಲ್ಲಿ ಪಾಸ್ವಾನ್ ಸಮುದಾಯವನ್ನು ನಿರ್ಲಕ್ಷಿಸಿದ ಗುರುತರ ಆರೋಪ ನಿತೀಶ್ ಮೇಲಿದೆ. ಅಲ್ಲದೆ, 2005ರಲ್ಲಿ ಎಲ್​ಜೆಪಿ 29 ಸೀಟುಗಳನ್ನು ಗೆದ್ದಿತ್ತಾದರೂ, ನಿತೀಶ್ ಪ್ರಭಾವದಿಂದಾಗಿ 22 ಶಾಸಕರು ಜೆಡಿಯು ಕಡೆ ವಾಲಿದ್ದರು. ಕುದುರೆ ವ್ಯಾಪಾರದ ದೂರುಗಳ ಹಿನ್ನೆಲೆಯಲ್ಲಿ ಅತಂತ್ರ ವಿಧಾನಸಭೆ ನಿರ್ವಣವಾಗಿ ಅದೇ ವರ್ಷದ ನವೆಂಬರ್​ನಲ್ಲಿ ಮರುಚುನಾವಣೆ ಘೊಷಣೆಯಾಗಿ, ಬಿಜೆಪಿ-ಜೆಡಿಯು ಮೈತ್ರಿ 139 ಸೀಟುಗಳನ್ನು ಬಾಚಿಕೊಂಡು ಸಲೀಸಾಗಿ ಸರ್ಕಾರ ರಚನೆ ಮಾಡಿತು. ಪಾಸ್ವಾನ್​ಗೆ 10ಕ್ಕಿಂತ ಹೆಚ್ಚು ಸೀಟು ಗೆಲ್ಲಲು ಸಾಧ್ಯವಾಗಿರಲಿಲ್ಲ. ರಾಜ್ಯದ ಮಹಾದಲಿತ ಮತವರ್ಗದ ಜನಪ್ರಿಯತೆ ಗಳಿಸಲು ಮುಂದಾದ ನಿತೀಶ್, ಪಾಸ್ವಾನ್​ರನ್ನು ಕಡೆಗಣಿಸುತ್ತಲೇ ಸಾಗಿದರು. ಪಾಸ್ವಾನ್ ಸಮುದಾಯವನ್ನು ಮಹಾದಲಿತ ವ್ಯಾಪ್ತಿಗೆ ಸೇರಿಸಬೇಕೆಂಬ ಬೇಡಿಕೆ ಕಿವಿಗೆ ಹಾಕಿಕೊಳ್ಳಲಿಲ್ಲ. ಪಂಚಾಯತ್ ಚುನಾವಣೆಗಳಲ್ಲೂ ಮಹಾದಲಿತರಿಗೆ ಹೆಚ್ಚಿನ ಮೀಸಲಾತಿ ಸಿಗುವಂತೆ ಹಾಗೂ ಯೋಜನೆಗಳಿಗೆ ಅಗತ್ಯ ಹಣಕಾಸು ನೆರವು ಪ್ರಾಪ್ತಿಯಾಗುವಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಪಾಸ್ವಾನ್ ಸಮುದಾಯ ಹೊರತು ಉಳಿದೆಲ್ಲಾ ದಲಿತರ ಮೆಚ್ಚುಗೆ ನಿತೀಶ್ ಪಾಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net