ಮಹಾಮಾರಿ ಕರೊನಾ ವ್ಯಾಪಕತೆಗೆ ನಲುಗಿದ ಸ್ಪೇನ್

Corona virus 19 may 20
Published on

ನವದೆಹಲಿ: ಸ್ಪೇನ್​ನಲ್ಲಿ ಮೊದಲ ಕರೊನಾ ಪ್ರಕರಣ ಬೆಳಕಿಗೆ ಬಂದಿದ್ದು ಜನವರಿ 31ರಂದು. ಜರ್ಮನಿಯಿಂದ ಬಂದಿದ್ದ ಪ್ರವಾಸಿಗರನ್ನು ಪರೀಕ್ಷೆಗೊಳಪಡಿಸಿದ್ದ ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿತ್ತು. ಫೆಬ್ರವರಿ ಮಧ್ಯಭಾಗದಲ್ಲೇ ಇಲ್ಲಿ ವೈರಾಣು ಸಾಮುದಾಯಿಕವಾಗಿ ಹಬ್ಬಿತ್ತು ಮತ್ತು ಮಾರ್ಚ್ 13ರ ವೇಳೆಗೆ ದೇಶದ ಎಲ್ಲಾ ಪ್ರಾಂತ್ಯಗಳಿಗೆ ವೈರಾಣು ವ್ಯಾಪಿಸಿಕೊಂಡಿತ್ತು.

ಲಾಕ್​ಡೌನ್ ಪ್ರಾರಂಭವಾಗಿದ್ದು ಮಾತ್ರ ಮಾರ್ಚ್ 14ರಂದು. ಮಾರ್ಚ್ ಅಂತ್ಯದ ವೇಳೆಗೆ, ಮ್ಯಾಡ್ರಿಡ್ ನಗರ ಅತಿ ಹೆಚ್ಚು ಸೋಂಕು ಮತ್ತು ಸಾವುಗಳನ್ನು ದಾಖಲಿಸಿತ್ತು. ವೈದ್ಯಕೀಯ ಸಿಬ್ಬಂದಿ ಮತ್ತು ನಿರಾಶ್ರಿತ ಕೇಂದ್ರಗಳಲ್ಲಿ ವಾಸಿಸುತ್ತಿದ್ದ ಜನರಿಗೇ ರೋಗ ತಗುಲಿತ್ತು. ಮಾರ್ಚ್ 25ರಂದು ಸಾವಿನ ಸಂಖ್ಯೆ ಚೀನಾವನ್ನು ಮೀರಿಸಿತ್ತು. ಏಪ್ರಿಲ್ 2ರಂದು, 24 ಗಂಟೆಗಳ ಅವಧಿಯಲ್ಲಿ 950 ಜನರು ವೈರಸ್​ನಿಂದ ಸಾವನ್ನಪ್ಪಿದ್ದರು. ಒಂದೇ ದಿನ ಇಷ್ಟೊಂದು ಸಾವಿನ ಪ್ರಮಾಣ ಯಾವ ದೇಶದಲ್ಲೂ ಆ ಸಂದರ್ಭದಲ್ಲಿ ದಾಖಲಾಗಿರಲಿಲ್ಲ. ಸದ್ಯ 2,33,037 ಕರೊನಾ ಕೇಸುಗಳು ದೃಢವಾಗಿವೆ. 27,940 ಮಂದಿ ಮೃತಪಟ್ಟಿದ್ದಾರೆ. 1,50,376 ಮಂದಿ ಗುಣಮುಖರಾಗಿದ್ದಾರೆ.

ಸಾಂಕ್ರಾಮಿಕ ರೋಗ ಹೊರತಾಗಿಯೂ ಕೆಲಸಕ್ಕೆ ಹೋಗುತ್ತಿದ್ದ ಸಂಘಟಿತ ವಲಯದ ಕಾರ್ವಿುಕರು, ಸೂಪರ್​ವಾರ್ಕೆಟ್ ಅಥವಾ ಹಿರಿಯರ ಆರೈಕೆ ಮಾಡುವಂತಹ ಕಡಿಮೆ-ಕೌಶಲ್ಯದ ಉದ್ಯೋಗಗಳಲ್ಲಿ ಕೆಲಸ ಮಾಡಬೇಕಾದ ಸಾಧ್ಯತೆ ಹೆಚ್ಚಾಗಿದೆ. ಆರೈಕೆ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಹಲವರು ವಲಸಿಗರಾಗಿದ್ದು ಅವರು ನಿರುದ್ಯೋಗ ಸೌಲಭ್ಯಗಳಿಗೆ ಅರ್ಹರಾಗಿಲ್ಲ. ಸೂರಿಲ್ಲದ ಜನರೂ ಅಲ್ಲಿಅಪಾಯದಲ್ಲಿದ್ದು, ಅವರಿಗೆ ಸಹಾಯ ಮಾಡುತ್ತಿದ್ದ ಸಾಮಾಜಿಕ ಸಂಸ್ಥೆಗಳೂ ವೈರಾಣುವಿನ ವಿಪರೀತ ಹರಡುವಿಕೆಯಿಂದಾಗಿ ತಮ್ಮ ಕಾರ್ಯಾಚರಣೆ ನಿಲ್ಲಿಸಬೇಕಾಗಿದೆ. ಮ್ಯಾಡ್ರಿಡ್ ಸಮುದಾಯವು ಮಿಲಿಟರಿ ತುರ್ತು ಘಟಕ ಆಗಮಿಸಬೇಕೆಂದು ಕೇಳಿಕೊಂಡಿದ್ದು, ಇಲ್ಲಿನ ಅತಿ ದೊಡ್ಡ ಕೊಳೆಗೇರಿಯಾಗಿರುವ ಕ್ಯಾಸಡಾ ರಿಯಲ್ ನಲ್ಲಿ ಜನರನ್ನು ಕಾಪಾಡುವಂತೆ ಕೇಳಿಕೊಂಡಿದೆ. ಈ ಕಿಡಿದಾದ ಪ್ರದೇಶದಲ್ಲಿ ಸೆಲ್ಪ್ ಐಸೊಲೇಷನ್ ಸಾಧ್ಯವಿಲ್ಲ. ಈ ಮಧ್ಯೆ, ಸ್ಪಾ್ಯನಿಷ್ ರೆಡ್ ಕ್ರಾಸ್ ಸಂಸ್ಥೆ ನೆರವಿಗೆ ಧಾವಿಸಿದ್ದು, ಜನರಿಗೆ ಆಹಾರ ಪೂರೈಕೆ ಮಾಡುತ್ತಿದೆ.

ವಿಳಂಬ ಕ್ರಮ: ಇಟಲಿ ಜತೆಗಿನ ಗಡಿ ಮುಚ್ಚುವ ಕ್ರಮ ಕೈಗೊಂಡರೂ, ಕರೊನಾ ವೈರಾಣು ಭೀಕರತೆ ಅರಿವಲ್ಲಿ ಸ್ಪೇನ್ ತೋರಿದ ನಿಧಾನಗತಿಯ ಪ್ರತಿಕ್ರಿಯೆ ಸೋಂಕು ತೀವ್ರಗೊಳ್ಳಲು ಕಾರಣವಾಯಿತು. ಜನ ಸೇರುವ ಬೃಹತ್ ಸಭೆಗಳನ್ನು ಮೊದಲೇ ನಿಷೇಧಿಸುವ ಮೂಲಕ ಕರೊನಾ ನಿಯಂತ್ರಿಸಬಹುದಿತ್ತು. ಆದರೆ ಸರ್ಕಾರ ಅದಕ್ಕೆ ಆದ್ಯತೆ ನೀಡಲಿಲ್ಲ. ಸ್ಪೇನ್ ಸರ್ಕಾರವು ಶೆನ್ಜೆನ್ ಬಯೋಈಸಿ ಬಯೋಟೆಕ್ನಾಲಜಿಯಿಂದ 6,40,000 ಕರೋನಾ ವೈರಸ್ ಪರೀಕ್ಷಾ ಕಿಟ್​ಗಳನ್ನು ತರಿಸಿಕೊಂಡಿತ್ತು. ಈ ಕಿಟ್ 80 ಪ್ರತಿಶತದಷ್ಟು ನಿಖರತೆ ಪ್ರಮಾಣ ಹೊಂದಿದೆ ಎಂದರೂ ಸ್ಪಾ್ಯನಿಷ್ ಸೊಸೈಟಿ ಆಫ್ ಇನ್ ಫೆಕ್ಷಿಯಸ್ ಡಿಸೀಸ್ ಅಂಡ್ ಕ್ಲಿನಿಕಲ್ ಮೈಕ್ರೋಬಯಾಲಜಿ ಈ ಪರೀಕ್ಷಾ ಕಿಟ್ ಶೇಕಡಾ 30 ಕ್ಕಿಂತ ಕಡಿಮೆ ನಿಖರತೆ ಪ್ರಮಾಣ ಹೊಂದಿದೆ ಎಂದು ತಿಳಿಸಿತು. ಹೀಗಾಗಿ, ಮ್ಯಾಡ್ರಿಡ್ ನಗರ ಅವುಗಳನ್ನು ನಿಷೇಧಿಸಿತು.

ನಿರುದ್ಯೋಗ: ಏಪ್ರಿಲ್​ನಲ್ಲಿ, 25ರಿಂದ 29 ವರ್ಷ ವಯಸ್ಸಿನವರಲ್ಲಿ ನಿರುದ್ಯೋಗ ಪ್ರಮಾಣ ಶೇ. 13.1 ರಷ್ಟು ಏರಿಕೆಯಾಗಿದೆ. ಮೊದಲ ತ್ರೖೆಮಾಸಿಕದಲ್ಲಿ, 25 ವರ್ಷದೊಳಗಿನವರ ನಿರುದ್ಯೋಗವು ಶೇ. 33 ಹೆಚ್ಚಿದೆ. ಅಂದರೆ, 2019ರ ಕೊನೆಯ ತ್ರೖೆಮಾಸಿಕಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಏರಿಕೆಯಾಗಿದೆ.ಏಪ್ರಿಲ್ ಅಂಕಿ ಅಂಶಗಳ ಪ್ರಕಾರ ಸುಮಾರು 4,60,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಲ್ಲಿ ಬಹುಪಾಲು ಮಂದಿ 35 ವರ್ಷದೊಳಗಿನವರಾಗಿದ್ದಾರೆ.

ಆರ್ಥಿಕ ಸಮಸ್ಯೆ: ಸರ್ಕಾರದ ವಿತ್ತೀಯ ಕೊರತೆ 2019ರಲ್ಲಿ ಶೇ. 2.6 ರಷ್ಟಿತ್ತು, ಇದು 2020 ರಲ್ಲಿ ಶೇ. 15ಕ್ಕೆ ಏರಿಕೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ತೆರಿಗೆ ಆದಾಯವು 40 ಬಿಲಿಯನ್ ಡಾಲರ್ ಕುಸಿಯಲಿದ್ದು, ಜಿಡಿಪಿ ಶೇ. 5ಕ್ಕೆ ತಗ್ಗಲಿದೆ ಎಂದು ಹೇಳಲಾಗಿದೆ. ಏತನ್ಮಧ್ಯೆ, ಸ್ಪೇನ್​ನ ಕೆಲವು ಭಾಗಗಳಲ್ಲಿನ ಗೃಹ ಮಾರಾಟ ಬೆಲೆಗಳು ಗಮನಾರ್ಹ ಕುಸಿತ ಕಂಡಿದೆ. ಪ್ರಮುಖ ಸಾಮಗ್ರಿಗಳಿಗೆ ಬೇಡಿಕೆ ಕುಗ್ಗಿರುವುದರಿಂದ ಸ್ಪೇನ್ ಮತ್ತಷ್ಟು ಸಂಕಷ್ಟಕ್ಕೀಡಾಗಬಹುದು ಎನ್ನಲಾಗಿದೆ. ಇಲ್ಲಿ ಸಿಮೆಂಟ್ ಪ್ರಧಾನ ಸಾಮಗ್ರಿ ವ್ಯಾಪ್ತಿಯಲ್ಲಿದ್ದು, ಒಂದು ವರ್ಷದ ಹಿಂದಿನ 1.2 ಟನ್ ಗಿದ್ದ ಬೆಲೆಯಲ್ಲಿ ಈಗ ಶೇ.50ರಷ್ಟು ಕುಸಿತ ಕಂಡಿದೆ. 1964ರಿಂದ ಇಲ್ಲಿಯವರೆಗೆ ಈ ಪ್ರಮಾಣದಲ್ಲಿ ಬೆಲೆ ಕುಸಿತಕ್ಕೆ ಸ್ಪೇನ್ ಸಾಕ್ಷಿಯಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net