ಸ್ಪೇಡೆಕ್ಸ್ ಉಪಗ್ರಹ ಡಿಡಾಕಿಂಗ್ ಯಶಸ್ವಿ; ಇಸ್ರೋದಿಂದ ಮತ್ತೊಂದು ಸಾಧನೆ, ಭವಿಷ್ಯದ ಯೋಜನೆಗಳಿಗೆ ಅನುಕೂಲ

ISRO
Published on

ನವದೆಹಲಿ: ಅಂತರಿಕ್ಷದಲ್ಲಿ ಎರಡು ಸ್ಪೇಡೆಕ್ಸ್ ಉಪಗ್ರಹಗಳನ್ನು ಯಶಸ್ವಿಯಾಗಿ ಬೇರ್ಪಡಿಸಿರುವುದಾಗಿ (ಡಿಡಾಕಿಂಗ್) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಪ್ರಕಟಿಸಿದೆ. ಚಂದ್ರ, ಮಾನವಸಹಿತ ಅಂತರಿಕ್ಷ ನೌಕೆ ಮತ್ತು ತನ್ನದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಮುಂತಾದ ಭವಿಷ್ಯದ ಮಿಷನ್​ಗಳಿಗೆ ಈ ಯಶಸ್ವಿ ಕಾರ್ಯಾಚರಣೆ ಹಾದಿ ಸುಗಮಗೊಳಿಸಿದೆ. ಕೇಂದ್ರ ಸಚಿವ ಜಿತೇಂದ್ರ ಪ್ರಸಾದ್ ಸಿಂಗ್ ಸ್ಪೇಡೆಕ್ಸ್ ಡಿ-ಡಾಕಿಂಗ್ ವಿಚಾರವನ್ನು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ‘ಸ್ಪೇಡೆಕ್ಸ್ ಉಪಗ್ರಹಗಳು ನಂಬಲಸಾಧ್ಯವಾದ ಡಿ-ಡಾಕಿಂಗ್ ಸಾಧಿಸಿವೆ. ಭಾರತೀಯ ಅಂತರಿಕ್ಷ ನಿಲ್ದಾಣ, ಚಂದ್ರಯಾನ 4 ಮತ್ತು ಗಗನಯಾನ ಸಹಿತ ಭವಿಷ್ಯದ ಮಹತ್ವಾಕಾಂಕ್ಷೆಯ ಮಿಷನ್​ಗಳ ಹಾದಿ ಇದರಿಂದ ಸುಗಮಗೊಂಡಿದೆ’ ಎಂದು ಸಚಿವ ಸಿಂಗ್ ಹೇಳಿದ್ದಾರೆ.

ಅವಳಿ ಉಪಗ್ರಹಗಳು: ಇಸ್ರೋ ಕಳೆದ ವರ್ಷ ಡಿಸೆಂಬರ್ 30ರಂದು ಸ್ಪೇಡೆಕ್ಸ್ ಮಿಷನ್ ಹಾರಿಬಿಟ್ಟಿತ್ತು. ವ್ಯೋಮದಲ್ಲಿ ಉಪಗ್ರಹಗಳ ಸೇರ್ಪಡೆ (ಡಾಕಿಂಗ್) ಪ್ರಯೋಗಾರ್ಥ ಎಸ್​ಡಿಎಕ್ಸ್01 ಮತ್ತು ಎಸ್​ಡಿಎಕ್ಸ್ 02 ಎಂಬ ಎರಡು ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ಇರಿಸಲಾಗಿತ್ತು. ಅನೇಕ ಪ್ರಯತ್ನಗಳ ನಂತರ ಇದೇ ವರ್ಷ ಜನವರಿ 16ರಂದು ಅವಳಿ ಉಪಗ್ರಹಗಳ ಸೇರ್ಪಡೆ ಪ್ರಕ್ರಿಯೆ ಯಶಸ್ವಿಯಾಗಿತ್ತು.

ಪ್ರತಿ ಭಾರತೀಯರ ಹೆಮ್ಮೆ: ಇಸ್ರೋ ತಂಡವನ್ನು ಅಭಿನಂದಿಸಿರುವ ಸಚಿವ ಸಿಂಗ್, ಇದು ಪ್ರತಿ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪೋ›ತ್ಸಾಹದಿಂದ ವಿಜ್ಞಾನಿಗಳ ಉತ್ಸಾಹ ಗಗನಮುಖಿಯಾಗಿದೆ ಎಂದು ಹೇಳಿದ್ದಾರೆ.

ISRO
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net