ಮಂಗಳ ಗ್ರಹ ನೈಜವಾಗಿ ಕಾಣುತ್ತಿದೆ; ಎಲಾನ್​ ಮಸ್ಕ್​ ಉದ್ಗರಿಸಿದ್ದೇಕೆ? ಸ್ಪೇಸ್​ಎಕ್ಸ್​ನಿಂದ ಮತ್ತೊಂದು ಮೈಲುಗಲ್ಲು

spaceEx
Published on

ಟೆಕ್ಸಾಸ್​: ಮಂಗಳನ ಅಂಗಳಕ್ಕೆ ಹಾರಿ ಬಿಡಲಾಗುವ ರಾಕೆಟ್​ ಮಾದರಿಯನ್ನು ಸ್ಪೇಸ್​ಎಕ್ಸ್​ ಸಂಸ್ಥೆ ಮಂಗಳವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ. ಗಾಳಿಯಲ್ಲಿ ನೂರಾರು ಅಡಿ ಎತ್ತರಕ್ಕೆ ಹಾರಾಟ ನಡೆಸಿದ ರಾಕೆಟ್​ಅನ್ನು ಬಳಿಕ ಮೇಲ್ಮುಖವಾಗಿ ನಿಲ್ಲಿಸುವಲ್ಲಿ ಯಶಸ್ಸು ಸಾಧಿಸಿತು.

ಟೆಕ್ಸಾಸ್​ ಸಮೀಪದ ಬ್ರೌನ್ಸ್​ವಿಲ್ಲೆಯಲ್ಲಿ ಈ ಹಾರಾಟ ಪ್ರಕ್ರಿಯೆ ಅಂದಾಜು 45 ಸೆಕೆಂಡ್​ಗಳ ಕಾಲ ನಡೆದು ಕೇವಲ 500 ಅಡಿ ಎತ್ತರಕ್ಕೆ ನೆಗೆದರೂ ಸ್ಪೇಸ್​ಎಕ್ಸ್​ ಸಂಸ್ಥೆ ಪಾಲಿಗೆ ಇದು ಮಹತ್ತರ ಬೆಳವಣಿಗೆಯಾಗಿದೆ. ಏಕೆಂದರೆ, ಈ ಮೊದಲಿನ ಪ್ರಯತ್ನಗಳಲ್ಲಿ ರಾಕೆಟ್​ಗಳು ಸ್ಫೋಟಗೊಂಡಿದ್ದವು.

ಈ ಪ್ರಯತ್ನ ಕೈಗೂಡುತ್ತಿದ್ದಂತೆ 'ಮಂಗಳ ಗ್ರಹ ನೈಜವಾಗಿ ಕಾಣುತ್ತಿದೆ..! ಈ ದಿಶೆಯಲ್ಲಿ ಪ್ರಗತಿ ಕಾಣುತ್ತಿದ್ದೇವೆ' ಎಂದು ಸಂಸ್ಥೆ ಸಂಸ್ಥಾಪಕ ಹಾಗೂ ಮುಖ್ಯಾಧಿಕಾರಿ ಎಲಾನ್​ ಮಸ್ಕ್​ ಟ್ವೀಟ್​ ಮಾಡಿದರು.

ನೈಜ ರಾಕೆಟ್ಅನ್ನು ​(ಸ್ಟಾರ್​ಶಿಪ್​) ಅತಿ ಎತ್ತರಕ್ಕೆ ಹಾರಿಬಿಡುವ ಮುನ್ನ ಇಂಥ ಅನೇಕ ಪ್ರಯೋಗಗಳು ನಡೆಯಲಿವೆ ಎಂದೆ ಮಸ್ಕ್​ ಮಾಹಿತಿ ನೀಡಿದ್ದಾರೆ. ನೈಜ ರಾಕೆಟ್​ 30 ಮೀಟರ್​ ಎತ್ತರದ ಉಕ್ಕಿನ ಗೋದಾಮಿನಂತೆ ಅಥವಾ ಕ್ಯಾನ್​ನಂತೆ ಇರಲಿದ್ದು, ಅದರ ಮೇಲೆ ಕ್ಯಾಪ್​ ಹಾಕಿದಂತೆ ಕಾಣಲಿದೆ.

ಭೂಕಕ್ಷೆ, ಚಂದ್ರ ಗ್ರಹ ಮಾತ್ರವಲ್ಲದೇ, ಮಂಗಳನ ಅಂಗಳಕ್ಕೂ ಮರುಬಳಕೆ ಮಾಡಬಲ್ಲ ಗಗನನೌಕೆಗಳನ್ನು ಉಡಾಯಿಸುವ ಗುರಿ ಸ್ಪೇಸ್​ ಎಕ್ಸ್​ ಸಂಸ್ಥೆಯದ್ದಾಗಿದೆ. ಸದ್ಯ ರಾಕೆಟ್​ಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಈ ನೌಕೆಗಳಲ್ಲಿ ಸಾಮಗ್ರಿಗಳ ಸಾಗಣೆ ಹಾಗೂ ಮಾನವ ಪ್ರಯಾಣ ನಡೆಯಲಿದೆ.

ಇತ್ತೀಚೆಗೆಷ್ಟೇ ನಾಸಾದ ಗಗನಯಾನಿಗಳು ಸ್ಪೇಸ್​ ಎಕ್ಸ್​ ತಯಾರಿಸಿದ ಡ್ರ್ಯಾಗನ್​ ಗಗನನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಎರಡು ತಿಂಗಳ ಬಳಿಕ ವಾಪಾಸಾಗಿದ್ದರು. ಈ ಯಶಸ್ಸು ಮಂಗಳನ ಯಾನದಲ್ಲೂ ಮರುಕಳಿಸುವ ವಿಶ್ವಾಸ ಸಂಸ್ಥೆಯದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net