

ವಾಷಿಂಗ್ಟನ್: ಬಾಹ್ಯಾಕಾಶ ಯಾನದಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಭಾರಿ ಸಾಧನೆಗೈದಿದೆ. ಕಳೆದ ತಿಂಗಳಷ್ಟೇ ನಾಸಾದ ಇಬ್ಬರು ಗಗನಯಾನಿಗಳನ್ನು ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿತ್ತು.
ಅಮೆರಿಕದ ನೆಲದಿಂದಲೇ ಗಗನಯಾನಿಗಳು ಬಾಹ್ಯಾಕಾಶ ನಡೆಸಿದ್ದು, ಇದೇ ಮೊದಲಾಗಿತ್ತು. ಜತೆಗೆ, ಗಗನಯಾನಿಗಳಿಗಾಗಿ ಫಾಲ್ಕನ್ ನೌಕೆ ರೂಪಿಸಿದ ಮೊದಲ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೂ ಸ್ಪೇಸ್ ಎಕ್ಸ್ ಪಾತ್ರವಾಗಿತ್ತು.
ಗಗನಯಾನಕ್ಕೆ ಬಳಸಿದ ರಾಕೆಟ್ 24 ಟನ್ ಸಾಮಗ್ರಿಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸಾಗಿಸಿತ್ತು. ಸ್ಪೇಸ್ ಎಕ್ಸ್ ರಾಕೆಟ್ ಉಡಾವಣೆ ಹಾಗೂ ಗಗಯಾನಿಗಳ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದವು. ಹಾರಾಟದ ಸಂಪೂರ್ಣ ದೃಶ್ಯಗಳನ್ನು ಕಾಸ್ಮಿಕ್ ಪರ್ಸ್ಪೇಕ್ಟಿವ್ಸ್ ಎಂಬ ಸಂಸ್ಥೆ ನಿಭಾಯಿಸಿತ್ತು.
ಇದೀಗ ಈ ರಾಕೆಟ್ ಉಡಾವಣೆಯ ಮತ್ತೊಂದು ಚಿತ್ರ ಭಾರಿ ಗಮನ ಸೆಳೆದಿದೆ. ರಾಕೆಟ್ಅನ್ನು ಉಡಾಯಿಸಿದ ಬಳಿಕ ಅದಕ್ಕೆ ಬಳಸಲಾಗಿದ್ದ ಬೂಸ್ಟರ್ಗಳು ಭೂಮಿಗೆ ಬೀಳುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ಎರಡೂ ಹೆಚ್ಚು ಕಡಿಮೆ ಏಕಕಾಲಕ್ಕೆ ಭೂಮಿಗೆ ಮರಳಿವೆ. ಬೆಂಕಿಯ ಉಂಡೆಗಳಂತಿರುವ ಈ ಬೂಸ್ಟರ್ಗಳ ಚಿತ್ರ ರಾತ್ರಿ ವೇಳೆ ಇನ್ನಷ್ಟು ಸುಂದರವಾಗಿ ಗೋಚರಿಸಿದೆ.
ಇದನ್ನೂ ಓದಿ; ಪಾಕಿಸ್ತಾನದ ವಿಮಾನ ದುರಂತಕ್ಕೆ ಕಾರಣವಾಗಿದ್ದು ಕರೊನಾ…!
ಇವುಗಳ ಪ್ರತಿಫಲನ ನೀರಿನಲ್ಲಿ ಸೆರೆಯಾಗಿರುವ ಚಿತ್ರವನ್ನು ನೋಡಿದರೆ, ಇಬ್ಬರು ಸೂರ್ಯರು ಮುಳುಗುತ್ತಿರುವಂತೆ ಭಾಸವಾಗುತ್ತದೆ. ಯಾವುದೋ ಸೈನ್ಸ್ ಫಿಕ್ಷನ್ ಚಿತ್ರವನ್ನು ನೋಡಿದಂತಾಗುತ್ತದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.