ಕರ್ನಾಟಕಕ್ಕೆ ನೈರುತ್ಯ ಮುಂಗಾರು ಆಗಮನ - ಮಳೆಯಿಂದಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

rain
Published on

ಬೆಂಗಳೂರು: ರಾಜ್ಯಕ್ಕೆ ನಿರೀಕ್ಷೆಗಿಂತ ಮುನ್ನ ನೈರುತ್ಯ ಮುಂಗಾರು ಭಾನುವಾರ(ಜೂನ್​2)ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ವಾಡಿಕೆಗಿಂತ ಒಂದು ವಾರ ಮುಂಚಿತವಾಗಿಯೇ ಮುಂಗಾರು ಆಗಮಿಸಿದಂತಾಗಿದೆ.

ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಅಂದರೆ ಜೂ. 7 ಅಥವಾ 8ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸುತ್ತದೆ. ಆದರೆ ಈ ಬಾರಿ ಒಂದು ವಾರ ಮುಂಚಿತವಾಗಿಯೇ ಮುಂಗಾರು ಆಗಮನವಾಗಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಶನಿವಾರ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಮುಂಗಾರು ಪ್ರವೇಶದೊಂದಿಗೆ ಭಾನುವಾರ ಸಹ ಕೆಲ ಕಡೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಮುಂದಿನ 2-3 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಪೂರ್ಣ ಪ್ರಮಾಣದಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ವರ್ಷ ಎಲ್ ನಿನೊ ಪ್ರಭಾವದಿಂದ ಬರ ಆವರಿಸಿದ್ದು, ಕುಡಿಯುವ ನೀರಿಗೂ ಜನ ತತ್ತರಿಸುವಂತಾಗಿತ್ತು. ಆದರೆ ಈ ಬಾರಿ ಲಾ ನಿನಾ ಪ್ರಭಾವ ಬೀರಿದ್ದು, ಇದರ ಪರಿಣಾಮವೇ ವಾಡಿಕೆಗಿಂತ ಮೊದಲೇ ಮುಂಗಾರು ಪ್ರವೇಶಿಸಿದೆ. ಜೂನ್ ಮೊದಲ ವಾರವೇ ಮುಂಗಾರು ಮಳೆ ಆರಂಭವಾಗಲಿದೆ. ಈ ಬಾರಿ ವಾಡಿಕೆಗಿಂತ ಬೇಗ ಮಳೆಗಾಲ ಪ್ರಾರಂಭವಾಗಿತ್ತಿರುವುದರಿಂದ ವರ್ಷವಿಡೀ ಅತ್ಯಧಿಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಉತ್ತರ ಭಾರತದಲ್ಲಿ ಬಿಸಿಗಾಳಿಗೆ ಜನರು ಪ್ರಾಣ ಬಿಡುತ್ತಿದ್ದರೆ ದಕ್ಷಿಣದಲ್ಲಿ ಮುಂಗಾರು ಮಳೆಯ ಸಿಂಚನ ಆಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ಹಲವೆಡೆ ತಲೆದೋರಿದ್ದ ನೀರಿನ ಸಮಸ್ಯೆಗೆ ಬ್ರೇಕ್​ ಬಿದ್ದಂತಾಗಿದೆ. ರೈತರು ಕೃಷಿ ಚಟುವಟಿಕೆ ಕೈಗೊಳ್ಳುವುದಕ್ಕೆ ಮಳೆ ಬರುತ್ತಿರುವುದು ಅನುಕೂಲವಾದಂತಾಗಿದೆ.

ಕೇರಳದಲ್ಲಿ ಈಗಾಗಲೇ ಮುಂಗಾರು ಮಳೆ ಸುರಿಯುತ್ತಿದೆ. ರಾಜ್ಯಕ್ಕೆ ನೈರುತ್ಯ ಮಾರುತಗಳ ಆಗಮನದ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳವರೆಗೆ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು ಜೂನ್‌ 3ರಂದು ಮುಂಗಾರು ಮಳೆ ಉತ್ತರ ಒಳನಾಡು ಪ್ರವೇಶ ಮಾಡೋ ಸಾಧ್ಯತೆಯಿದ್ದು ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net