ಸೌಜನ್ಯ ಸಾವು ಪ್ರಕರಣ: ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಸಿಬಿಐ ಕೋರ್ಟ್ ತೀರ್ಪು

Soujanya Death Case
Published on

ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಇಂದು (ಜೂ.16) ಪ್ರಕಟವಾಗಿದೆ. ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಘಟನೆ ನಡೆದ ಹನ್ನೊಂದು ವರ್ಷಗಳ ಬಳಿಕ ಇಂದು ತೀರ್ಪು ಹೊರಬಿದ್ದಿದೆ. ಪ್ರಕರಣ ಸಂಬಂಧ ಸಾಕ್ಷ್ಯಾಧಾರ ಕೊರತೆಯಿಂದಾಗಿ ಆರೋಪಿ ಸಂತೋಷ್​ ರಾವ್​ನನ್ನು ಬಿಡುಗಡೆ ಮಾಡಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸಿ.ಬಿ. ಅವರು ಆದೇಶ ಹೊರಡಿಸಿದರು.

ಮೃತ ಸೌಜನ್ಯ ಉಜಿರೆಯ ಎಸ್​ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಆಕೆಯನ್ನು 2012ರ ಅಕ್ಟೋಬರ್ 10 ರಂದು ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಕಾಡಿನಲ್ಲಿ ಈ ಕೃತ್ಯ ನಡೆದಿತ್ತು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗಿ ಜನಾಕ್ರೋಶ ವ್ಯಕ್ತವಾಗಿತ್ತು.

ಘಟನೆ ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ರಾವ್​ನನ್ನು ಬಂಧಿಸಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡು ಕೃತ್ಯ ನಡೆಸಿದ್ದ ಎನ್ನಲಾಗಿತ್ತು. ಆರೋಪಿಯು ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಹೇಳಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net