

ಸೊರಬ: ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕಂದಾಯ ಇಲಾಖೆಯಿಂದ ಮಂಜೂರಾತಿ ಪತ್ರಕ್ಕೆ ಒಪ್ಪಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಗುರುಕುಮಾರ ಪಾಟೀಲ್ ಅವರ ನೇತೃತ್ವದಲ್ಲಿ ನಿಯೋಗ ಸಚಿವ ಮಧು ಬಂಗಾರಪ್ಪ ಅವರಿಗೆ ಮಂಗಳವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಸೊರಬ ಹಿರೇಶಕುನ ಗ್ರಾಮದ ಸರ್ವೇ ನಂ. 111ರಲ್ಲಿ ಮಂಜೂರಾದ 3 ಎಕರೆ ಜಮೀನಿನಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ಮಂಜೂರಾತಿ ಪತ್ರಕ್ಕೆ ಒಪ್ಪಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿ, ವಿವಿಧ ಸಮುದಾಯಗಳಿಗೆ ಮಂಜೂರಾದ ಜಮೀನುಗಳಿಗೆ ಮಂಜೂರಾತಿ ನೀಡುವ, ಸಮುದಾಯ ಭವನ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿವಿಧ ಸಮುದಾಯಗಳ ಮುಖಂಡರ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಂತರ ನಿಯೋಗದ ಸದಸ್ಯರು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಶಂಕರ್ ಬಿದರಿ ಅವರನ್ನು ಸನ್ಮಾನಿಸಿದರು. ಪ್ರಮುಖರಾದ ಸೋಮಣ್ಣ, ಮಲ್ಲಿಕಾರ್ಜುನ, ಶಿವನ ಗೌಡ, ಚನ್ನಬಸಪ್ಪ, ಕೋಟೇಶ್ವರ ಸ್ವಾಮಿ, ಪ್ರದೀಪ್ ಕುಮಾರ್, ಸತೀಶ್ ಗೌಡ, ಚಂದ್ರಪ್ಪ, ಪ್ರಭಾವತಿ, ನಿಂಗರಾಜ ಗೌಡ ಇತರರಿದ್ದರು.