ಗಡುವಿನ ಬಳಿಕ ಇಂಗ್ಲಿಷ್ ಫಲಕಗಳಿಗೆ ಮಸಿ

kannadasene
ಚಿಕ್ಕಮಗಳೂರಿನ ಭಗತ್‌ಸಿಂಗ್ ಅಟೋ ನಿಲ್ದಾಣದಲ್ಲಿ ಕನ್ನಡ ಸೇನೆ ಅಧ್ಯಕ್ಷ ಕೆ.ಕುಮಾರ್ ಅವರನ್ನು ಸ್ವಾಗತಿಸಲಾಯಿತು. ಪಿ.ಸಿ.ರಾಜೇಗೌಡ, ರವಿ, ಜಯಪ್ರಕಾಶ್, ಸತೀಶ್, ಶಂಕರೇಗೌಡ, ಲಕ್ಷ್ಮಣ್, ಶಿವು, ನವೀನ್ ಇತರರಿದ್ದರು.
Published on

ಚಿಕ್ಕಮಗಳೂರು: ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಕನ್ನಡ ಸೇನೆ ಧೈರ್ಯವಾಗಿ ಮುನ್ನುಗ್ಗಿ ಕನ್ನಡ ಬೆಳವಣಿಗೆ ಸಹಕರಿಸುತ್ತಿದೆ. ಅಂಗಡಿ ಮಾಲೀಕರು ನಾಮಫಲಕದಲ್ಲಿ ಶೇ.80ರಷ್ಟು ಕನ್ನಡ ಪದಗಳ ಬಳಕೆ ಮಾಡುವಂತೆ ಫೆ.28 ತನಕ ಗಡುವು ನೀಡಲಾಗಿತ್ತು. ಗಡುವಿನ ಬಳಿಕವೂ ನಾಮಫಲಕ ಬದಲಿಸದಿದ್ದರೆ ಮಸಿ ಬಳಿಯಲಾಗುವುದು ಎಂದು ಕನ್ನಡ ಸೇನೆ ಅಧ್ಯಕ್ಷ ಕೆ.ಕುಮಾರ್ ತಿಳಿಸಿದರು.

ನಗರದ ಮಲ್ಲಂದೂರು ರಸ್ತೆಯ ಭಗತ್‌ಸಿಂಗ್ ಅಟೋ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸೇನೆ ಹಾಗೂ ಕನ್ನಡಪರ ಸಂಘಟನೆಗಳ ಜತೆಗೂಡಿ ಇಡೀ ರಾಜ್ಯಾದ್ಯಂತ ದೊಡ್ಡ ಅಭಿಯಾನ ಕೈಗೊಂಡು, ಅಂಗಡಿಗಳ ಆಂಗ್ಲ ಭಾಷೆಯ ನಾಮಫಲಕಗಳಿಗೆ ಮಸಿಬಳಿಯಲಾಗುವುದು ಎಂದರು.
ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಕನ್ನಡ ಭಾಷೆ ಬೆಳವಣಿಗೆ ನಾವೇ ಸಹಕರಿಸದಿದ್ದರೆ ಕನ್ನಡ ಮಣ್ಣಿನ ಕಂಪು ಮರೆಯಾಗುವ ಸಾಧ್ಯತೆಯಿದೆ. ರಾಜ್ಯದ ಅಂಗಡಿ ಮಾಲೀಕರು ಜಾಗೃತರಾಗಿ ನಾಮಫಲಕದಲ್ಲಿ ಶೇ.80ರಷ್ಟು ಕನ್ನಡ ಪದ ಬಳಸಿ ನಾಡಿನ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಅಧ್ಯಕ್ಷರ ಆಶಯದಂತೆ ಮುಂಬರುವ ದಿನಗಳಲ್ಲಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ನಾಡಿನ ಏಳಿಗೆಗೆ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದು ತಿಳಿಸಿದರು.
ಕನ್ನಡ ಸೇನೆ ರಾಜ್ಯ ಮುಖಂಡ ರವಿ, ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸತೀಶ್, ಮುಖಂಡರಾದ ಶಂಕರೇಗೌಡ, ಹುಣಸೇಮಕ್ಕಿ ಲಕ್ಷ್ಮಣ್, ಶಿವು, ನವೀನ್, ಹರೀಶ್, ಪಾಲಾಕ್ಷಿ, ವಿನಯ್, ಅನ್ವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net