

ಮುಂಬಯಿ: ಮಾಯಾನಗರಿ ಮುಂಬಯಿ ಕೇವಲ ಹಣ ಗಳಿಕೆಯ ಕೇಂದ್ರವಾಗಿರದೆ ಸಾಹಿತ್ಯಿಕ, ಸಾಂಸ್ಕ್ರತಿಕ ಚಟುವಟಿಕೆಗಳ ನೆಲೆಯಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಹೇಳಿದ್ದಾರೆ.
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ, ಮುಂಬಯಿ ಹವ್ಯಕ ವೆಲ್ಪೇರ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಅ. 8ರಂದು ಘಾಟ್ಕೋಪರಿನ ಹವ್ಯಕರ ಸಭಾಗೃಹದಲ್ಲಿ ನಡೆದ "ಸೂರಿ ಪರ್ವ-ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರ ಜೀವನ ಸಾಧನೆ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಪರ್ವ ಅಂದರೆ ಹಬ್ಬ. ಸೂರಿ ಎಂದರೆ ಸೂರ್ಯ. ಸೂರ್ಯನಂತಹ ಸೂರಿ ಶಾಸ್ತ್ರಿಯವರ ಹೆಸರಿನ ಹಬ್ಬ ಇದಾಗಿದೆ. ಸೂರಿ ಶಾಸ್ತ್ರಿಯವರು ಮುಂಬಯಿ ನೆಲದಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಿದವರು. ಅವರ ಗ್ರಂಥ ಸಂಪಾದನೆಯ ಕಾರ್ಯದಲ್ಲಿ ಅನೇಕ ಯಕ್ಷಗಾನ ಪ್ರಸಂಗಗಳ ಸಂಪಾದನೆಯೂ ಸೇರಿದೆ. ಯಕ್ಷಗಾನ ಕ್ಷೇತ್ರಕ್ಕೆ, ಕನ್ನಡ ಕಲಾಕೇತ್ರಕ್ಕೆ ಹಾಗೂ ಸಾಹಿತ್ಯಕ್ಕೆ ಉತ್ತರ ಕನ್ನಡದವರ ಕೊಡುಗೆ ಮಹತ್ವದ್ದಾಗಿದೆ" ಎಂದರು.
ಕೃತಿ ಬಿಡುಗಡೆ ಮಾಡಿದ ಕನ್ನಡ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ.ಜಿ. ಎನ್. ಉಪಾಧ್ಯ ಮಾತನಾಡಿ, "19ನೆಯ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಸಂದಿಗ್ಧ ಕಾಲಘಟ್ಟದಲ್ಲಿ ಇದ್ದ ಸಂದರ್ಭದಲ್ಲಿ ಕನ್ನಡಕ್ಕಾಗಿ ಹೋರಾಡಿದ ಧೀಮಂತ ಚೇತನ ಕರ್ಕಿ ವೆಂಕಟರಮಣ ಶಾಸ್ತ್ರಿ. ಅವರ ಸಾಂಸ್ಕ್ರತಿಕ ಪರಿಚಾರಿಕೆ ಅತ್ಯಂತ ಮಹತ್ವದ್ದು" ಎಂದು ಹೇಳಿದರು. ಉಪಾಧ್ಯ ಅವರು ಸೂರಿ ಶಾಸ್ತ್ರಿಯವರ ಗ್ರಂಥ ಸಂಪಾದನಾ ಸಾಹಸದ ಬಗೆಗೆ ವಿವರಿಸುತ್ತ ಕರ್ಕಿಯವರು ಸಂಪಾದಿಸಿದ ʼತುರಂಗ ಭಾರತʼ ಮತ್ತು ʼಶಂಕರ ಸಂಹಿತೆ ʼಗ್ರಂಥಗಳ ವಿಶೇಷತೆಗಳನ್ನು ಉಲ್ಲೇಖಿಸಿದರು.
ಅಧ್ಯಕ್ಷತೆ ವಹಿಸಿದ್ದ ಹವ್ಯಕ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಭಾಗವತ್ ಮಾತನಾಡಿ, ಹವ್ಯಕ ಸಂಸ್ಥೆಯು ಕಳೆದ ಹದಿನೈದು ವರ್ಷಗಳಿಂದ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರ ಸ್ಮರಣಾರ್ಥ ಪ್ರಶಸ್ತಿಯನ್ನು ಪ್ರದಾನ ಮಾಡುತ್ತ ಬಂದಿದೆ ಎಂದು ತಿಳಿಸಿದರು.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ವಿದ್ಯಾರ್ಥಿ ಶಶಿಕಲಾ ಹೆಗಡೆ ಎಂ.ಎ. ಆಧ್ಯಯನದ ಸಂದರ್ಭದಲ್ಲಿ ಸಿಧ್ದಪಡಿಸಿದ ಸಂಪ್ರಬಂಧ "ಸೂರಿ ಪರ್ವ" ಕೃತಿ ರೂಪದಲ್ಲಿ ಹೊರಬಂದಿದೆ. ಹವ್ಯಕ ಸಂದೇಶದ ಸಂಪಾದಕಿ ಅಮಿತಾ ಭಾಗವತ್ ಅವರು ಕೃತಿಯ ಕುರಿತು ಮಾತನಾಡಿದರು. ಕರ್ನಾಟಕ ಮಲ್ಲ ದಿನಪತ್ರಿಕೆ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ಅಕ್ಷಯ ಮಾಸಿಕದ ಸಂಪಾದಕ ಈಶ್ವರ್ ಅಲೆವೂರ್, ಮೊಗವೀರ ಮಾಸಿಕದ ಅಶೊಕ್ ಸುವರ್ಣ, ಹವ್ಯಕ ವೆಲ್ಫೆರ್ ಟ್ರಸ್ಟಿನ ಉಪಾಧ್ಯಕ್ಷ ಸಂಜಯ್ ಭಟ್, ಕಾರ್ಯದರ್ಶಿ ನಾರಾಯಣ್ ಅಕದಾಸ್, ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ. ಉಮಾರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸೂರಿ ನಮನ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶೈಲಜಾ ಹೆಗಡೆ ಶಂಕರ ಸಂಹಿತೆಯ ಆಯ್ದ ಪದ್ಯಗಳ ಕಾವ್ಯವಾಚನವನ್ನು ಹಾಗೂ ಕಲಾ ಭಾಗವತ್ ಅವರು ತುರಂಗ ಭಾರತದ ಆಯ್ದ ಪದ್ಯಗಳ ಗಮಕ ವಾಚನವನ್ನು ಪ್ರಸ್ತುತಪಡಿಸಿದರು. ಶಶಿಕಲಾ ಹೆಗಡೆಯವರು ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ನಾಟಕದ ಆಯ್ದ ಸಂಭಾಷಣೆಗಳನ್ನು ಓದಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತನುಜಾ ಹೆಗಡೆ ವಂದನಾರ್ಪಣೆ ಸಲ್ಲಿಸಿದರು.