ಕನ್ನಡಿಗರ ಭಾವನೆಗೆ ಧಕ್ಕೆ: FIR ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಸೋನು ನಿಗಮ್​

dk - 2025-05-13T134348.236
Published on

ಬೆಂಗಳೂರಿನ ಕಾಲೇಜು ಕಾರ್ಯಕ್ರಮವೊಂದರಲ್ಲಿ ಅಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ(FIR) ರದ್ದುಪಡಿಸುವಂತೆ ಕೋರಿ ಗಾಯಕ ಸೋನು ನಿಗಮ್​ ಮಂಗಳವಾರ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಇದೇ ಏ.25-26 ರಂದು ನಗರದ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಗಮ್ ಕನ್ನಡಿಗ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಮಂಗಳವಾರ ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಪೀಠದ ಮುಂದೆ ಬಂದಿದ್ದು, ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ. ಕನ್ನಡ ಪರ ಸಂಘಟನೆಗಳು ನೀಡಿದ ದೂರಿನ ಮೇರೆಗೆ ಮೇ.3 ರಂದು ಸೋನು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸೋನು ನಿಗಮ್​ ಹೇಳಿದ್ದೇನು..?

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಸೋನ್​ ನಿಗಮ್​ ಗಾಯನ ಮಾಡುತ್ತಿದ್ದ ಸಮಯದಲ್ಲಿ ಕೆಲವರು, ಕನ್ನಡ, ಕನ್ನಡ(ಕನ್ನಡ ಹಾಡು ಹೇಳಿ) ಎಂದಿದ್ದಕ್ಕೆ ಸೋನು ನಿಗಮ್​ ಏಕಾಏಕಿ ಗರಂ ಆಗಿದ್ದಾರೆ. ಮುಂದುವರೆದು, ''ಕನ್ನಡ.. ಕನ್ನಡ.. ಇದೇ ಕಾರಣ.. ಪಹಲ್ಗಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ. ಈಗ ನೀವು ಏನು ಮಾಡಿದ್ರಲ್ಲ.. ಅದೇ ಕಾರಣ!'' ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net