ಹೆತ್ತವರ ಋಣ ತೀರಿಸಲಾಗದು… ತಂದೆ-ತಾಯಿಯ ಮೂರ್ತಿ ಸ್ಥಾಪಿಸಿ ದೇವಸ್ಥಾನ ಕಟ್ಟಿಸಿದ ಪುತ್ರರು!

Mother Father
Published on

ಹೈದರಾಬಾದ್​: ಜನ್ಮ ನೀಡಿದ ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಕಣ್ಣಿಗೆ ಕಾಣುವ ನಿಜವಾದ ದೇವರು ಅಪ್ಪ-ಅಮ್ಮ ಎಂದು ಎಲ್ಲರ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ಸಂಬಂಧಗಳು ನಶಿಸಿಹೋಗುತ್ತಿವೆ. ವೃದ್ಧಾಪ್ಯದಲ್ಲಿ ಆಸರೆಯಾಗದ ಪುತ್ರರು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳಿದ್ದರೂ ಕೆಲ ಪಾಲಕರು ಅನಾಥರಾಗಿ ಸಾಯುತ್ತಿದ್ದಾರೆ. ಈ ರೀತಿಯ ಹಲವು ಘಟನೆಗಳು ಈಗಾಗಲೇ ಬೆಳಕಿಗೆ ಬಂದಿವೆ. ಆದರೆ, ಇವೆಲ್ಲದರ ನಡುವೆ ಕೆಲವರು ತಂದೆ-ತಾಯಿಯನ್ನು ದೇವರೆಂದು ಭಾವಿಸಿ ಅವರಿಗೆ ದೇವಾಲಯಗಳನ್ನು ಕಟ್ಟಿ ಪೂಜಿಸುವವರು ಇದ್ದಾರೆ. ಅದಕ್ಕೆ ತಾಜಾ ಉದಾಹರಣೆಯೇ ಈ ಘಟನೆ.

ತಂದೆ-ತಾಯಿಯ ದೇವಸ್ಥಾನದ ನಿರ್ಮಿಸಿರುವ ವಿಸ್ಮಯಕಾರಿ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದೆ. ಮೂವರು ಗಂಡುಮಕ್ಕಳು ತಮ್ಮ ತಂದೆ-ತಾಯಿ ಮೇಲೆ ತುಂಬಾ ಪ್ರೀತಿ ಇಟ್ಟಿದ್ದರು. ಹೀಗಾಗಿ ದೇವಾಲಯವನ್ನು ಕಟ್ಟಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಸಿದ್ದಿಪೇಟೆ ಜಿಲ್ಲೆಯ ಅಕ್ಕಣ್ಣಪೇಟೆ ಗ್ರಾಮದ ಗೊಟ್ಟೆ ಕನಕಯ್ಯ ಮತ್ತು ಕೊಮಾರವ್ವ ದಂಪತಿಗೆ ಸದಯ್ಯ, ಮಹೇಂದರ್ ಮತ್ತು ಚಿರಂಜೀವಿ ಎಂಬ ಮೂವರು ಪುತ್ರರಿದ್ದಾರೆ. ಇವರಲ್ಲಿ ಸದಯ್ಯ ಮತ್ತು ಮಹೇಂದರ್ ಗ್ರಾಮದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಚಿರಂಜೀವಿ ಸಿದ್ದಿಪೇಟೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಫಾಲಕರು ಇತ್ತೀಚೆಗೆ ನಿಧನರಾದರು. ತಂದೆ-ತಾಯಿಯ ನೆನಪುಗಳನ್ನು ಮರೆಯಲಾಗದ ಪುತ್ರರು ಅವರನ್ನು ಜೀವಂತವಾಗಿ ಕಾಣಬೇಕೆಂದು ಬಯಸಿದ್ದರು. ಅದಕ್ಕಾಗಿ ಅವರಿಗಾಗಿ ಮಂದಿರ ನಿರ್ಮಿಸಲು ಯೋಚಿಸಿದರು.

ನಿರೀಕ್ಷೆಯಂತೆ ಕನಕಯ್ಯ ಮತ್ತು ಕೊಮಾರವ್ವ ದೇವಸ್ಥಾನ ನಿರ್ಮಾಣವಾಗಿದೆ. ಇಲ್ಲಿ ನಿತ್ಯವೂ ಪಾಲಕರಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮೂವರು ಪುತ್ರರು, ನಮ್ಮ ಪಾಲಕರು ಅವರ ನೆಮ್ಮದಿಗಾಗಿ ಎಂದೂ ಯೋಚಿಸಿಲ್ಲ. ಅಂತಹ ಮಹಾನ್ ಮೂರ್ತಿಗಳಿಗೆ ನಾವು ಜೀವಮಾನವಿಡೀ ಋಣಿಯಾಗಿದ್ದೇವೆ. ಅದಕ್ಕಾಗಿಯೇ ಅವರ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ. ಪ್ರತಿ ಹಬ್ಬ ಹರಿದಿನಗಳಂದು ಅವರಿಗೆ ಮಹಾಪೂಜೆ ನೆರವೇರಿಸಲಾಗುವುದು ಎಂದರು. ಪುತ್ರರ ಹಿರಿಮೆ ಕಂಡು ಗ್ರಾಮಸ್ಥರು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net