

ಇಟಾನಗರ: ಅರುಣಾಚಲ ಪ್ರದೇಶದಲ್ಲಿ 60 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ 46 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಮರಳಿದೆ
ಭಾನುವಾರ(ಜೂನ್ 2) ನಡೆದ ಮತೆಣಿಕೆಯಲ್ಲಿ 60 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಪಕ್ಷವು 46 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದ್ದರಿಂದ ಬಿಜೆಪಿ ಸತತ ಮೂರನೇ ಬಾರಿಗೆ ಅರುಣಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಮರಳಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯೊಂದಿಗೆ ಈಶಾನ್ಯ ರಾಜ್ಯದ ವಿಧಾನಸಭೆಯ 50ಸ್ಥಾನಗಳಿಗೆ ಚುನಾವಣೆ ಸಹ ನಡೆದಿತ್ತು. ಈ ಸಂಬಂಧ ಮತ ಎಣಿಕೆ ನಡೆಯಿತು. ಉಳಿದ 10 ಸ್ಥಾನಗಳನ್ನು ಕೇಸರಿ ಪಕ್ಷವು ಅವಿರೋಧವಾಗಿ ಗೆದ್ದುಕೊಂಡಿತ್ತು.
ಅವಿರೋಧವಾಗಿ ಗೆದ್ದ 10 ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಕೂಡ ಒಬ್ಬರು.
ಇನ್ನು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮೂರು ಸ್ಥಾನಗಳನ್ನು ಗಳಿಸಿದೆ ಮತ್ತು ಸಮಾನ ಸಂಖ್ಯೆಯ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಮತ್ತು ಎನ್‌ಸಿಪಿ ಎರಡು ಮತ್ತು ಒಂದು ಸ್ಥಾನವನ್ನು ಪಡೆದುಕೊಂಡಿವೆ.
ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ. 2019ರಲ್ಲಿ ಕೇಸರಿ ಪಕ್ಷ 41 ಸ್ಥಾನಗಳನ್ನು ಗೆದ್ದಿತ್ತು.