

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾಗೂ ಆಟಗಾರನಾಗಿ ಸತತ ವೈಫಲ್ಯದಿಂದ ಮುಂಬೈ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಒಂದೆಡೆಯಾದರೆ, ಟಿ20 ವಿಶ್ವಕಪ್ಗೆ ತಂಡದಲ್ಲಿ ಸ್ಥಾನ ನೀಡಿದ್ದು ಏಕೆ ಎಂಬ ಟೀಕೆ ಇನ್ನೊಂದೆಡೆ. ಇಲ್ಲದರ ನಡುವೆ ವಿಚ್ಛೇದನದ ವದಂತಿಗಳು ಹಾರ್ದಿಕ್ ಪಾಂಡ್ಯ ಮನಸ್ಸಿನಲ್ಲಿ ನೋವುಂಟು ಮಾಡಿದೆ.
ಆದರೆ, ಇದನೆಲ್ಲ ಬದಿಗೊತ್ತಿ ಸ್ವಲ್ಪ ರಿಲ್ಯಾಕ್ಸ್ ಆಗಲು ಹಾರ್ದಿಕ್ ಲಂಡನ್ಗೆ ತೆರಳಿದ್ದರು. ಅಲ್ಲಿಂದಲೇ ಇತ್ತೀಚೆಗಷ್ಟೇ ಭಾರತ ತಂಡವನ್ನು ಸೇರಿಕೊಂಡ ಹಾರ್ದಿಕ್, ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸಿಡಿದೆದ್ದರು. ಬ್ಯಾಟಿಂಗ್ನಲ್ಲಿ 40 ರನ್ ಗಳಿಸಿ, ಬೌಲಿಂಗ್ನಲ್ಲಿ ಒಂದು ವಿಕೆಟ್ ಸಹ ಪಡೆದರು.
ಪಂದ್ಯದ ನಂತರ ಮಾತನಾಡಿದ ಹಾರ್ದಿಕ್, ತಾವು ಎದುರಿಸುತ್ತಿರುವ ಟೀಕೆಗಳು ಮತ್ತು ವಿಚ್ಛೇದನ ವಂದತಿಯ ಬಗ್ಗೆ ಕೊನೆಗೂ ಮೌನ ಮುರಿದರು. ನಾನು ಕಳೆದ ಕೆಲವು ತಿಂಗಳುಗಳಿಂದ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇನೆ. ಯಾವುದೇ ಸಮಸ್ಯೆಯನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ, ಕೊನೆಯವರೆಗೂ ಹೋರಾಡಲು ಪ್ರಯತ್ನಿಸುತ್ತೇನೆ ಎಂದು ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಜೀವನವೆಂಬ ರಣರಂಗದಲ್ಲಿ ಸದಾ ಹೋರಾಡಬೇಕು. ಕೆಲವೊಮ್ಮೆ ಜೀವನದಲ್ಲಿ ಅಥವಾ ಮೈದಾನದಲ್ಲಿ ಕಷ್ಟಕರ ಸಂದರ್ಭಗಳು ಉದ್ಭವಿಸುತ್ತವೆ. ಅವುಗಳನ್ನು ಸುಲಭವಾಗಿ ಬಿಡುವುದರಿಂದ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ ಎಂದು ನನಗೆ ತಿಳಿದಿದೆ. ಆದರೆ ಅದೆಲ್ಲವನ್ನೂ ದಾಟಿ ಮುನ್ನಡೆಯುವತ್ತ ಗಮನ ಹರಿಸುತ್ತೇನೆ. ಈ ಹಿಂದೆಯೂ ನನಗೆ ಇದೇ ರೀತಿಯ ಪರಿಸ್ಥಿತಿ ಇತ್ತು. ಆಗ ಯಾವ ರೀತಿಯ ಕಾರ್ಯವಿಧಾನವನ್ನು ಅನುಸರಿಸಿದೆ ಈಗ ಅದೇ ರೀತಿ ಪ್ರಯತ್ನಿಸುತ್ತೇನೆ. ಹೋರಾಟ ಮುಂದುವರಿಸಿದರೆ ಪರಿಸ್ಥಿತಿಯಲ್ಲಿ ಬದಲಾವಣೆ ಆಗಲಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ನನ್ನ ಜೀವನದಲ್ಲಿ ಕೆಟ್ಟ ದಿನಗಳು ಮಾತ್ರವಲ್ಲ, ಒಳ್ಳೆಯ ದಿನಗಳೂ ಇವೆ. ಕಷ್ಟದ ಹಂತಗಳ ಮೂಲಕ ಹಾದು ಹೋಗಲೇಬೇಕು. ನನ್ನ ಜೀವನದಲ್ಲಿ ನಾನು ಅಂತಹ ಕಷ್ಟಗಳನ್ನು ಅನೇಕ ಬಾರಿ ಅನುಭವಿಸಿದ್ದೇನೆ. ಅದರಿಂದ ಹೊರಗಡೆ ಸಹ ಬಂದಿದ್ದೇನೆ. ನಾನು ಯಶಸ್ಸನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ಮುಂದೆ ಏನು ಮಾಡಬೇಕೆಂದು ಗಮನಹರಿಸುತ್ತೇನೆ. ನಾನು ಎಂದಿಗೂ ಸಮಸ್ಯೆಗಳಿಂದ ಓಡಿಹೋಗಲು ಪ್ರಯತ್ನಿಸುವುದಿಲ್ಲ. ಕೊನೆಯವರೆಗೂ ಹೋರಾಡಲು ಪ್ರಯತ್ನಿಸುತ್ತೇನೆ. ಶೀಘ್ರದಲ್ಲೇ ಎಲ್ಲವೂ ನನ್ನ ಪರವಾಗಿ ಬದಲಾಗುತ್ತದೆ ಎಂದು ಹಾರ್ದಿಕ್ ಭರವಸೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)