ಸೋನಿಯಾ, ರಾಹುಲ್, ಡಿಕೆಶಿ ಜಾಮೀನಿನ ಮೇಲೆ ಹೊರಗಿದ್ದರೂ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದೆ!: ಜೆ.ಪಿ. ನಡ್ಡಾ

JP Nadda
Published on

ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿರುವುದು ಮುಂದುವರಿದಿದ್ದು, ಇದೀಗ ಕಾಂಗ್ರೆಸ್​ನ ಅಂಥ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತಲ್ಲೇ ಎದಿರೇಟು ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯಕ ಪರ ಪ್ರಚಾರಕ್ಕಾಗಿ ರೋಡ್ ಶೋ ನಡೆಸಿದ ಜೆ.ಪಿ ನಡ್ಡಾ, ಕಾಂಗ್ರೆಸ್​ ಭ್ರಷ್ಟಾಚಾರದ ಪಟ್ಟಿಯನ್ನೇ ಮಾಡಿದ್ದಾರೆ.

ಅರ್ಕಾವತಿ ಬಡಾವಣೆ ಅವ್ಯವಹಾರ ಯಾರ ಕಾಲದಲ್ಲಿ ಆಯಿತು? ಎಂದ ಅವರು ಸಿದ್ದರಾಮಯ್ಯ ಸರ್ಕಾರವನ್ನು ಪ್ರಸ್ತಾಪಿಸಿದರು. ಶಿಕ್ಷಕರು, ಪೊಲೀಸರ ನೇಮಕಾತಿ ಹಗರಣ ಆಗಿದ್ದು ಕೂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಎಂದ ನಡ್ಡಾ, ಸ್ಕೈ ಸ್ಟೀಲ್ ಬ್ರಿಡ್ಜ್ ಹಗರಣ ಆಗಿದ್ದು ಕೂಡ ಕಾಂಗ್ರೆಸ್ ಅವಧಿಯಲ್ಲಿ ಎನ್ನುತ್ತ, ಕಾಂಗ್ರೆಸ್​ನವರನ್ನು ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.

ಕಾಂಗ್ರೆಸ್​ ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಆದರೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಅಂಥವರಿರುವ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದೆ ಎಂದು ನಡ್ಡಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net