ಬಿಜೆಪಿಯಿಂದ ಮಾತ್ರ ಕರ್ನಾಟಕ-ಕರಾವಳಿಯ ರಕ್ಷಣೆ: ಅಮಿತ್ ಷಾ

AmitShah
Published on

ಉಡುಪಿ: ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾವೇರಿದ್ದು, ಒಂದೆಡೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ, ಇನ್ನೊಂದೆಡೆ ಕೇಂದ್ರ ಗೃಹಸಚಿವ ಅಮಿತ್ ಷಾ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಿ ಮತ ಯಾಚನೆ ಮಾಡುತ್ತಿದ್ದಾರೆ. ಸದ್ಯ ಉಡುಪಿ ಜಿಲ್ಲೆಯ ಸಿದ್ಧಾಪುರದಲ್ಲಿ ಅಮಿತ್ ಷಾ ಪ್ರಚಾರದಲ್ಲಿ ತೊಡಗಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರವಾಗಿ ಸಿದ್ಧಾಪುರದಲ್ಲಿ ಮತ ಯಾಚಿಸುತ್ತಿರುವ ಅಮಿತ್ ಷಾ, ಮೋದಿಜಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಬೈಂದೂರು ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು. ಅಲ್ಲದೆ ಬೈಂದೂರು ಅಭ್ಯರ್ಥಿಯ ಗೆಲುವಿನ ಅಂತರ 25,000ಕ್ಕಿಂತ ಜಾಸ್ತಿ ಆಗಬೇಕು. ಅದು 50 ಸಾವಿರಕ್ಕೂ ಅಧಿಕವಿದ್ದರೆ ನಾನು ವಿಜಯೋತ್ಸವ ಆಚರಣೆಗೂ ಬರುತ್ತೇನೆ ಎಂದರು.

ಕರಾವಳಿ ಕರ್ನಾಟಕವನ್ನು ರಕ್ಷಣೆ ಮಾಡುವಂಥ ಕೆಲಸ ಭಾರತೀಯ ಜನತಾ ಪಾರ್ಟಿ ಮಾಡುತ್ತಿದೆ. ಕರ್ನಾಟಕ ಕರಾವಳಿಯನ್ನು ರಕ್ಷಣೆ ಮಾಡುವ ಉದ್ದೇಶ ನಿಮಗಿದ್ದಲ್ಲಿ ಭಾರತೀಯ ಜನತಾ ಪಾರ್ಟಿಗೇ ಮತ್ತೆ ಮತ ನೀಡಿ ಎಂದು ಅಮಿತ್ ಷಾ ಕರೆ ನೀಡಿದರು.

ಅಡಿಕೆ ಬೆಲೆ ಇಳಿಕೆಯಾದಾಗ ಬಿಜೆಪಿ ಸರ್ಕಾರ ಅಡಿಕೆ ಬೆಳೆಗಾರರ ನೆರವಿಗೆ ಬಂದಿತ್ತು. ಮೀನುಗಾರರಿಗೆ ಹೊಸ ಬಂದರುಗಳನ್ನು ನಿರ್ಮಿಸುವ ಮೂಲಕ ಸಹಾಯ ನೀಡಿತು. ಎನ್​ಎಐಯನ್ನು ಬಳಸಿಕೊಂಡು ದೇಶದ್ರೋಹಿಗಳನ್ನು ಬಿಜೆಪಿ ಮಟ್ಟ ಹಾಕಿದೆ. ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆಗಡುಕರನ್ನು ಹುಡುಕಿ ಜೈಲಿಗೆ ತಳ್ಳಲಾಗಿದೆ ಎಂದು ಸಿದ್ಧಾಪುರದಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net