ನಾಳೆ ಸಾಗರಕ್ಕೆ ಸೋಂದಾ ಶ್ರೀಗಳ ಆಗಮನ

gangadharendra swami
ಗಂಗಾಧರೇಂದ್ರ ಶ್ರೀ
Published on

ಸಾಗರ: ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮತ್ತು ಅವರ ಶಿಷ್ಯರಾದ ಶ್ರೀ ಆನಂದ ಭೋಧೇಂದ್ರ ಸರಸ್ವತಿ ಸ್ವಾಮೀಜಿ ಮೇ 24ರಂದು ಸಾಗರದ ಶೃಂಗೇರಿ ಶಂಕರಮಠಕ್ಕೆ ಆಗಮಿಸಲಿದ್ದು, ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.

ಅಂದು ಬೆಳಗ್ಗೆ 11ಕ್ಕೆ ಶ್ರೀಗಳು ವರದಹಳ್ಳಿ ಆಶ್ರಮಕ್ಕೆ, ಸಂಜೆ ಶಂಕರಮಠಕ್ಕೆ ಭೇಟಿ ನೀಡುವರು. ಈ ಸಂದರ್ಭ ವಿವಿಧ ಮಹಿಳಾ ಸಂಘಟನೆಗಳಿಂದ ಶಾಂಕರಸ್ತೋತ್ರ ಪಠಣ ಮತ್ತು ಭಗವದ್ಗೀತೆ ಪಠಣ ಕಾರ್ಯಕ್ರಮ ಇರುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ವಜ್ರೋತ್ಸವ ವರ್ಷದ ಅಂಗವಾಗಿ ಶ್ರೀಮಠದಿಂದ ವಿವಿಧ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶಂಕರ ಮಠದ ಪರಂಪರೆಯಲ್ಲಿ ಬಂದಿದ್ದು, ಭಗವದ್ಗೀತೆ ಪಠಣ ಅಭಿಯಾನವನ್ನು ರಾಜ್ಯಾದ್ಯಂತ ನಡೆಸುವಲ್ಲಿ ಮಾರ್ಗದರ್ಶಕರಾಗಿ ನಿಂತವರು. ಜತೆಗೆ ಉತ್ತರ ಕನ್ನಡ ಭಾಗದಲ್ಲಿ ಪರಿಸರ ನಾಶದ ವಿರುದ್ಧ ಧ್ವನಿ ಎತ್ತಿದವರು. ಧರ್ಮ, ಅಧ್ಯಾತ್ಮ ಪಸರಿಸುವ ಕೆಲಸ ಶ್ರೀಗಳಿಂದ ನಡೆದಿದೆ ಎಂದು ತಿಳಿಸಿದರು.

ಸಾಗರಕ್ಕೆ ಸೋಂದಾ ಮಠದ ಇಬ್ಬರೂ ಶ್ರೀಗಳು ಒಟ್ಟಿಗೆ ಬರುತ್ತಿರುವುದು ಇದೇ ಮೊದಲು. 25ರಂದು ವರದಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮ ಇದ್ದು, ಶ್ರೀಗಳಿಂದ ಆಶೀರ್ವಚನ ಇರುತ್ತದೆ. ಸ್ವರ್ಣವಲ್ಲಿ ಶ್ರೀಗಳು ವಿಪ್ರ ಸಮಾಜದಲ್ಲಿ ವಧುವಿನ ಸಮಸ್ಯೆ ಎದುರಾದಾಗ ಉತ್ತರ ಭಾರತದಿಂದ ವಧುವನ್ನು ಈ ಭಾಗಕ್ಕೆ ತಂದು ವಿವಾಹ ಸಂಬಂಧ ಏರ್ಪಡಿಸುವಲ್ಲಿ ಪ್ರಮುಖವಾಗಿ ಮಾರ್ಗದರ್ಶನ ಮಾಡಿದವರು ಎಂದು ಮಾ.ಸ.ನಂಜುಂಡಸ್ವಾಮಿ ಹೇಳಿದರು.

ನಾರಾಯಣಮೂರ್ತಿ, ಬದರಿನಾಥ್, ವಿನಾಯಕ ಜೋಯ್ಸ್, ಸವಿತಾ ಶ್ರೀಕಾಂತ್, ಗೋಪಿ ದೀಕ್ಷಿತ್, ಗಿರಿಜಾ ರಾಮಚಂದ್ರ, ಮೀರಾ ಉಡುಪ, ರೇಷ್ಮಾ ರಘುಪತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net