

ಉತ್ತರಪ್ರದೇಶ: 5 ಸಾವಿರ ರೂ. ಹಣ ನೀಡಲು ನಿರಾಕರಿಸಿದ ತಾಯಿಯನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪುತ್ರನೊಬ್ಬ, ಆಕೆಯ ಮೃತದೇಹವನ್ನು ವಿಲೇವಾರಿ ಮಾಡಲು ಸೂಟ್‌ಕೇಸ್‌ನಲ್ಲಿ ತುಂಬಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ ವರದಿಯಾಗಿದೆ.
ಬಿಹಾರದ ಐಐಟಿ ಆಕಾಂಕ್ಷಿ ಎಂದು ಹೇಳಲಾದ ಯುವಕ ತನ್ನ ತಾಯಿಯನ್ನು ಬರ್ಬರವಾಗಿ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ಶವವನ್ನು ತುಂಬಿ, ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಎಸೆಯಲು ಮುಂದಾಗಿದ್ದ ಎಂದು ವರದಿ ಉಲ್ಲೇಖಿಸಿದೆ. 5,000 ರೂಪಾಯಿ ಕೊಡಲು ನಿರಾಕರಿಸಿದ ಕಾರಣಕ್ಕೆ ಆರೋಪಿ ಹಿಮಾಂಶು ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದ್ದು, ಇದೀಗ ಆತನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಹರಿಯಾಣದ ಹಿಸಾರ್‌ನಲ್ಲಿ ಕೆಲಸ ಮಾಡಿಕೊಂಡು ವಾಸವಿದ್ದ ಹಿಮಾಂಶು, ತನ್ನೊಂದಿಗೆ ಇದ್ದ ತಾಯಿ ಪ್ರತಿಮಾ ದೇವಿ ಬಳಿ 5,000 ರೂ. ಕೊಡುವಂತೆ ಕೇಳಿದ್ದಾನೆ. ಈ ವೇಳೆ ಅವರು ಹಣ ಕೊಡಲು ನಿರಾಕರಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಪುತ್ರ ತನ್ನ ತಾಯಿಯೊಡನೆ ಮಾತಿನ ಚಕಮಕಿ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದೇ ತಡ ಕೋಪದ ಭರದಲ್ಲಿ ಹಿಮಾಂಶು ತನ್ನ ಅಮ್ಮನ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ.
ಇದಾದ ಬಳಿಕ ತಾಯಿಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ತ್ರಿವೇಣಿ ಸಂಗಮದಲ್ಲಿ ವಿಲೇವಾರಿ ಮಾಡಲು ಪ್ರಯಾಗ್‌ರಾಜ್‌ಗೆ ಹೋಗಿದ್ದಾನೆ. ಈ ವೇಳೆ ನದಿ ತೀರದಲ್ಲಿ ಆರೋಪಿಯ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಆತನ ಬಳಿಯಿದ್ದ ಸೂಟ್‌ಕೇಸ್ ತೆರೆದು ಮೃತ ಮಹಿಳೆಯ ಶವವನ್ನು ಪತ್ತೆ ಮಾಡಿದ್ದಾರೆ.
ಪೊಲೀಸರು ಕೂಡಲೇ ಹಿಮಾಂಶುವನ್ನು ಬಂಧಿಸಿದ್ದು, ತನಿಖೆಗೆ ಹಾಜರುಪಡಿಸಿದ್ದಾರೆ. ಘಟನೆಯ ವಿವರಗಳನ್ನು ನೀಡಿದ ಡಿಸಿಪಿ ದೀಪಕ್ ಭೂಕರ್, ಹಣದ ವಿಚಾರಕ್ಕೆ ಆರೋಪಿ ತನ್ನ ತಾಯಿಯನ್ನು ಹತ್ಯೆಗದಿದ್ದಾನೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).