

ನವದೆಹಲಿ: ತಂದೆ ತೀರಿದ ಮೇಲೆ ಮಕ್ಕಳ ನಡುವೆ ಕಿತ್ತಾಟ-ಜಗಳಗಳು ನಡೆಯುವುದು ಸರ್ವೇಸಾಮಾನ್ಯ. ಅಂಥದ್ದೇ ಒಂದು ಜಗಳಕ್ಕೆ ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್ ಮುಖರ್ಜಿ ಅವರ ಮಕ್ಕಳೂ ಹೊರತಾಗಿಲ್ಲ. ಆದರೆ ಮುಖರ್ಜಿ ಅವರ ಮಕ್ಕಳ ನಡುವಿನ ಜಗಳಕ್ಕೆ ಕಾರಣವೇ ಬೇರೆ. ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಹಾಗೂ ಪುತ್ರಿ ಶರ್ಮಿಷ್ಠ ಮುಖರ್ಜಿ ಈಗ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿಯೇ ಕಿತ್ತಾಟಕ್ಕೆ ಇಳಿದಿದ್ದಾರೆ. ಅಣ್ಣ-ತಂಗಿಯ ಈ ಕಿತ್ತಾಟ ಈಗ ಸಂಸ್ಥೆಯೊಂದಕ್ಕೆ ತಲೆನೋವಾಗಿ ಪರಿಣಮಿಸಿದೆ.
ಹೌದು.. ಇಷ್ಟಕ್ಕೆಲ್ಲ ಕಾರಣವಾಗಿರುವುದು ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆ. ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆ 'ದ ಪ್ರೆಸಿಡೆನ್ಷಿಯಲ್ ಈಯರ್ಸ್'ಅನ್ನು ರೂಪಾ ಪಬ್ಲಿಕೇಷನ್ಸ್ ಸಂಸ್ಥೆಯವರು ಜನವರಿಯಲ್ಲಿ ಪ್ರಕಟಿಸುವುದಾಗಿ ಘೋಷಿಸಿದ್ದಾರೆ. ಮಾತ್ರವಲ್ಲ ಅದರ ಆಯ್ದ ಕೆಲವು ಭಾಗ ಈಗಾಗಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಅದು ಕೂಡ ವಿವಾದವನ್ನು ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅಭಿಷೇಕ್, ಈಗ ತಂದೆ ಇಲ್ಲವಾಗಿರುವುದರಿಂದ ಅವರು ಬರೆದಿರುವುದನ್ನು ನಾನೊಮ್ಮೆ ನೋಡಿ ಅನುಮತಿಸಬೇಕಿದೆ. ಅವರು ಜೀವಂತ ಇದ್ದಿದ್ದರೂ ನನ್ನಿಂದ ಈ ಕೆಲಸ ಮಾಡಿಸುತ್ತಿದ್ದರು. ಹೀಗಾಗಿ ಪುಸ್ತಕ ಪ್ರಕಟಿಸುವ ಮೊದಲು ಅದರ ಕರಡು ಪ್ರತಿ ನನಗೆ ಕೊಟ್ಟು ನಾನು ಒಪ್ಪಿಗೆ ನೀಡಿದ ಮೇಲೆ ಪ್ರಕಟಿಸಿ ಎಂಬುದಾಗಿ ರೂಪಾ ಪಬ್ಲಿಕೇಷನ್ಸ್ಗೆ ಮೆನ್ಷನ್ ಮಾಡಿ ಸೂಚಿಸಿದ್ದಾರೆ.
ಮತ್ತೊಂದೆಡೆ ಅಭಿಷೇಕ್ ತಂಗಿ ಶರ್ಮಿಷ್ಠ, ತಾನೂ ಆ ಪುಸ್ತಕದ ವಾರಸುದಾರ್ತಿ ಎಂದು ಹೇಳಿಕೊಂಡಿದ್ದು, ಅಣ್ಣ ಅಭಿಷೇಕ ಮಧ್ಯ ಪ್ರವೇಶಿಸಿ ಅನವಶ್ಯಕ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದ್ದಾರೆ. ತಂದೆ ಅನಾರೋಗ್ಯಪೀಡಿತರಾಗುವ ಮೊದಲೇ ಅದನ್ನು ಬರೆದಿಟ್ಟಿದ್ದು, ಎಲ್ಲವೂ ಅವರ ಕೈಬರಹದಲ್ಲೇ ಇದೆ. ಅವರು ಹೇಳಿರುವ ಅಭಿಪ್ರಾಯ ಅವರ ಸ್ವಂತದ್ದಾಗಿದ್ದು, ಯಾರೂ ಬಿಟ್ಟಿ ಪ್ರಚಾರಕ್ಕಾಗಿ ಅದರ ಪ್ರಕಟಣೆ ತಡೆಯುವಂತಿಲ್ಲ. ಇದು ತಂದೆಗೆ ತೋರುವ ಅಗೌರವ ಎಂದು ಅಣ್ಣನ ಹಸ್ತಕ್ಷೇಪಕ್ಕೆ ಆಕ್ಷೇಪ ಸಲ್ಲಿಸಿದ್ದಾರೆ. (ಏಜೆನ್ಸೀಸ್)