ಆತ್ಮಸ್ಥೈರ್ಯ ಇದ್ದರೆ ಸಮಸ್ಯೆಗಳಿಗೆ ಪರಿಹಾರ

idsg
ಐಡಿಎಸ್‌ಜಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಮನುಷ್ಯನಿಗೆ ಸಮಸ್ಯೆಗಳು ಎದುರಾಗುವುದು ಸಹಜ. ಎದುರಿಸಲು ಆತ್ಮಸ್ಥೈರ್ಯ ಮುಖ್ಯ. ಅತುರದ ನಿರ್ಧಾರಗಳು ಮನುಷ್ಯನ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಜೀವನದ ಮೌಲ್ಯಗಳನ್ನು ಅರಿತು ಬಾಳಬೇಕು. ಜೀವನದಲ್ಲಿ ಸಣ್ಣಪುಟ್ಟ ಏರಿಳಿತಗಳು ಸಹಜ. ಆದರೆ ಅವುಗಳನ್ನು ಮೆಟ್ಟಿನಿಂತರೆ ಜೀವನ ಸಾರ್ಥಕವಾಗುತ್ತದೆ. ಭಾವನೆಗಳು ಏನೇ ಇದ್ದರೂ ನಾವು ಅವುಗಳನ್ನು ಪಾಲಕರು, ಸ್ನೇಹಿತರು, ಶಿಕ್ಷಕರೊಂದಿಗೆ ಹಂಚಿಕೊಂಡಾಗ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಸರಿಯಾದ ಸಲಹೆಗಳನ್ನು ಪಡೆದು ಮುನ್ನಡೆಯಬೇಕು. ಎಂಥದ್ದೇ ಕಠಿಣ ಸಂದರ್ಭದಲ್ಲೂ ಆತ್ಮಹತ್ಯೆಯ ದಾರಿ ತುಳಿಯಬಾರದು. ಮುಖ್ಯವಾಗಿ ಮಾದಕ ವ್ಯಸನಗಳಿಗೆ ಗುರಿಯಾಗದೆ ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶ್ವತ್ಥ ಬಾಬು ಮಾತನಾಡಿ, ಮಾನಸಿಕ ಕಾಯಿಲೆಗಳಿಗೆ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ. ವಿನಯ್‌ಕುಮಾರ್, ಶಿಕ್ಷಣ ಅಧಿಕಾರಿ ಜಲಜಾಕ್ಷಿ, ಡಾ. ಸೀಮಾ, ಡಾ. ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net