ರೈತರ ಸಮಸ್ಯೆ ಬಗೆಹರಿಸಿ | Farmer Issues

farmer problems
Published on

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಹಿಂಗಾರು ಮಳೆ ಆರಂಭವಾಗಿದೆ. ತುಮಕೂರು, ದಾವಣಗೆರೆ ಮುಂತಾದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಏರುಪೇರಿನಿಂದಾಗಿ ಬಿತ್ತನೆಗೆ ಹಿನ್ನಡೆಯಾಗಿದೆ. ಆದರೆ ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆ ಬೀಳುತ್ತಿರುವುದರಿಂದ ಬಿತ್ತನೆಗೆ ರೈತರು ಸಡಗರದಿಂದ ಸಜ್ಜಾಗಿದ್ದಾರೆ. ಪರಿಣಾಮವಾಗಿ, ಬಿತ್ತನೆ ಬೀಜಗಳಿಗೆ ಭಾರಿ ಬೇಡಿಕೆ ಉಂಟಾಗಿದೆ (Farmer Issues). ರಾಜ್ಯದಲ್ಲೆಲ್ಲೂ ಇವುಗಳಿಗೆ ಈ ಬಾರಿ ಕೊರತೆ ಕಂಡುಬಂದಿಲ್ಲದಿರುವುದು ಸಂತಸದ ಸಂಗತಿ. ಆದರೆ, ಸಾಕಷ್ಟು ದಾಸ್ತಾನು ಇದ್ದರೂ ಬೆಲೆಯಲ್ಲಿ ಮಾತ್ರ ಭಾರಿ ಏರಿಕೆ ಕಂಡುಬರುತ್ತಿದೆ. ಕಡಲೆ, ಸೂರ್ಯಕಾಂತಿ, ಜೋಳ ಮುಂತಾದ ಬಿತ್ತನೆ ಬೀಜಗಳ ಬೆಲೆಯಲ್ಲಿ ಶೇಕಡ 10ರಿಂದ 15ರಷ್ಟು ಹೆಚ್ಚಳ ಆಗಿರುವುದು ರೈತರ ಸಂಭ್ರಮಕ್ಕೆ ತಣ್ಣೀರೆರಚಿದಂತಾಗಿದೆ.

ಡಿಎಪಿ ರಸಗೊಬ್ಬರದ ಕೊರತೆ

ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಕಡಲೆ, ಬೆಳಗಾವಿ, ವಿಜಯಪುರ, ಕೊಪ್ಪಳ, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಜೋಳದ ಬೀಜದ ದರದಲ್ಲಿ ಏರಿಕೆಯಾಗಿದೆ. ಕಳೆದ ವರ್ಷದ ಹಿಂಗಾರಿನ ದರಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರತಿ ಪ್ಯಾಕೆಟ್ ಬೆಲೆ 110 ರಿಂದ 350 ರೂ.ವರೆಗೆ ಹೆಚ್ಚಳವಾಗಿರುವುದು ಕೃಷಿಕ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ. ಇನ್ನೊಂದೆಡೆ, ಕೆಲವು ಜಿಲ್ಲೆಗಳಲ್ಲಿ ಡಿಎಪಿ ರಸಗೊಬ್ಬರದ ಕೊರತೆ ಕಂಡುಬರುತ್ತಿದೆ. ಪ್ರಮುಖವಾಗಿ ಉತ್ತರ ಕರ್ನಾಟಕಕ್ಕೆ ರಸಗೊಬ್ಬರ ಪೂರೈಕೆ ಮಾಡುವ ಹುಬ್ಬಳ್ಳಿಯಲ್ಲಿ ದಾಸ್ತಾನಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್-ಲೆಬನಾನ್ ಮಧ್ಯೆ ಆರಂಭವಾಗಿರುವ ಯುದ್ಧ ಕಾರಣ ಎಂದು ಹೇಳಲಾಗುತ್ತಿದೆ. ಕಡಲೆ, ಜೋಳ, ಗೋಧಿ, ಸೂರ್ಯಕಾಂತಿ ಬಿತ್ತನೆ ಮಾಡಲು ಸಿದ್ಧರಾಗಿದ್ದ ರೈತರು ಇದರಿಂದ ನಿರಾಶರಾಗಿದ್ದಾರೆ.

ಈ ಬಗೆಯ ಸಮಸ್ಯೆ ಹೊಸದೇನಲ್ಲ. ಪ್ರತಿ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬೆಲೆ ದಿಢೀರನೆ ಹೆಚ್ಚಿಸಲಾಗುತ್ತದೆ. ಅಲ್ಲದೆ, ಇವುಗಳ ಪೂರೈಕೆಯಲ್ಲೂ ಹತ್ತುಹಲವು ತೊಂದರೆಗಳು, ಗೊಂದಲಗಳು. ‘ರೈತರಿಗೆ ತೊಂದರೆ ಆಗದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಕೃಷಿ ಇಲಾಖೆ ಸಿದ್ಧ ಉತ್ತರ ನೀಡುತ್ತದೆಯಾದರೂ, ವಾಸ್ತವ ಹಾಗಿಲ್ಲ ಎಂಬುದಕ್ಕೆ ಈಗ ಕಂಡುಬರುತ್ತಿರುವ ಸಮಸ್ಯೆಗಳು ಸ್ಪಷ್ಟ ನಿದರ್ಶನವಾಗಿವೆ. ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವ ಪ್ರದೇಶಗಳಿಗೆ ಸಕಾಲಕ್ಕೆ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ನ್ಯಾಯಯುತ ಬೆಲೆಯಲ್ಲಿ ಪೂರೈಸುವುದು, ಸರ್ಕಾರದ ಜವಾಬ್ದಾರಿಯಾಗಿದೆ.

ಆದಾಯ ಮಾತ್ರ ಕಡಿಮೆ

ಪ್ರತಿ ವರ್ಷವೂ ರೈತರಿಗೆ ಕೃಷಿ ಚಟುವಟಿಕೆಗಳ ಖರ್ಚು ಹೆಚ್ಚುತ್ತಿದ್ದು, ಆದಾಯ ಮಾತ್ರ ಕಡಿಮೆಯಾಗುತ್ತಿದೆ. ಹೀಗಾದರೆ ರೈತರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ. ಬಿತ್ತನೆ ಬೀಜ ಹಾಗೂ ಗೊಬ್ಬರದ ಬೆಲೆ ನಿಯಂತ್ರಣದ ನಿಟ್ಟಿನಲ್ಲಿ ಸೂಕ್ತ ನೀತಿಯನ್ನು ಹಾಕಿಕೊಳ್ಳುವುದು ಈ ನಿಟ್ಟಿನಲ್ಲಿ ಅಗತ್ಯವಾಗಿದೆ. ಇಲ್ಲವಾದರೆ, ಪ್ರಕೃತಿ ವರ ನೀಡಿದರೂ, ಇಂಥ ಸಮಸ್ಯೆಗಳಿಂದ ರೈತರು ಹಾನಿ ಅನುಭವಿಸುವಂತಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net