

| ಹರೀಶ್ ಬೇಲೂರು ಬೆಂಗಳೂರು
ರಾಜ್ಯದಲ್ಲಿ ಅವ್ಯಾಹತವಾಗಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಖನಿಜ ರಕ್ಷಣಾ ಪಡೆ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪಡೆಗೆ ನಿವೃತ್ತ ಸೈನಿಕರನ್ನು ನೇಮಕ ಮಾಡುವ ಮುಖೇನ, ಭೂಮಿ ಕೊರೆದು ಅದಿರು ತೆಗೆಯುವ ಕಳ್ಳ ವ್ಯವಹಾರದ ಜಾಲಗಳ ಹೆಡೆಮುರಿ ಕಟ್ಟುವ ಯೋಜನೆ ರೂಪಿಸಿದ್ದು, ಸೆಪ್ಟೆಂಬರ್ನಲ್ಲಿ ಚಾಲನೆ ಸಿಗಲಿದೆ.
ಅನಧಿಕೃತ ಕಲ್ಲು, ಮರಳು ಗಣಿಗಾರಿಕೆ, ಎಂ ಸ್ಯಾಂಡ್, ಜಲ್ಲಿ ಕ್ರಷರ್ ಘಟಕಗಳನ್ನು ಮಟ್ಟ ಹಾಕಲು, ದಾಸ್ತಾನು ಮತ್ತು ಸಾಗಣೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್, ಕಂದಾಯ, ಅರಣ್ಯ ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದರೂ ಪರಿಣಾಮಕಾರಿಯಾಗಿ ತಡೆಯಲು ವಿಫಲರಾಗಿದ್ದಾರೆ.
ಯಾವ ಜಿಲ್ಲೆಗಳಲ್ಲಿ ಕಾರ್ಯಾಚರಣೆ?: ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಹಾವೇರಿ, ಬೆಳಗಾವಿ, ಕಲಬುರಗಿ, ಕೊಪ್ಪಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅನಧಿಕೃತ ಗಣಿ ಚಟುವಟಿಕೆಗಳು ನಡೆಯುತ್ತಿರುವುದನ್ನು ಇಲಾಖೆ ಗುರುತಿಸಿದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಈ 8 ಜಿಲ್ಲೆಗಳಲ್ಲಿ ಖನಿಜ ರಕ್ಷಣಾ ಪಡೆಯನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಅಕ್ರಮ ಗಣಿಗಾರಿಕೆ ನಿಯಂತ್ರಣವಾದರೆ ಹಾಗೂ ರಾಜಸ್ವ ಆದಾಯದಲ್ಲಿ ಹೆಚ್ಚಳ ಕಂಡುಬಂದರೆ ಇನ್ನುಳಿದ ಜಿಲ್ಲೆಗಳಿಗೆ ವಿಸ್ತರಿಸುವುದು ಸರ್ಕಾರದ ಉದ್ದೇಶವಾಗಿದೆ.
ಹೀಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧೀನದಲ್ಲಿ ‘ಖನಿಜ ರಕ್ಷಣಾ ಪಡೆ’ ರಚಿಸಲಾಗುತ್ತಿದೆ. ಇಲಾಖೆಯಲ್ಲಿ ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಆರಂಭವಾಗಿದೆ. ಜೈಲು ಶಿಕ್ಷೆ ವಿಧಿಸಲು ಬಲವಾದ ಕಾನೂನು ಜಾರಿಯಲ್ಲಿಲ್ಲದ ಕಾರಣಕ್ಕೆ ಅಕ್ರಮ ಗಣಿಗಾರಿಕೆ ಮುಂದುವರಿದಿದೆ. ಕರ್ನಾಟಕದಲ್ಲಿ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಗ್ರಾನೈಟ್ ಸೇರಿ ಎಲ್ಲ ರೀತಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 2019-20ರಲ್ಲಿ 4,935, 2020-21ರಲ್ಲಿ 5,584 ಹಾಗೂ 2021-22ರಲ್ಲಿ 2,996 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆ ಕೇಸ್ಗಳೇ ಜಾಸ್ತಿ. 2,221 ಎಫ್ಐಆರ್ ದಾಖಲಾಗಿದ್ದು, 1,198 ಪ್ರಕರಣಗಳು ಕೋರ್ಟ್ನಲ್ಲಿ ದಾಖಲಾಗಿವೆ. ಒಟ್ಟು 70.15 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕಾರ್ಯಾಚರಣೆ ಹೇಗೆ?: ಪ್ರತಿ ಜಿಲ್ಲೆಗೆ ಮೂವರು ಹವಾಲ್ದಾರ್ ದರ್ಜೆಯ ನಿವೃತ್ತ ಸೈನಿಕರನ್ನು ಖನಿಜ ರಕ್ಷಣಾ ಪಡೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗುತ್ತದೆ. ಅಧಿಕೃತ ಭದ್ರತಾ ಏಜೆನ್ಸಿಗಳು ಮತ್ತು ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಸೈನಿಕರನ್ನು ಮಾತ್ರ ನೇಮಿಸಲಾಗುತ್ತದೆ. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಮತ್ತು ಹಿರಿಯ ಭೂವಿಜ್ಞಾನಿ ನಿಯಂತ್ರಣದಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರದ ಗಣಿ ಸಚಿವಾಲಯ ಆದೇಶದನ್ವಯ 8 ಜಿಲ್ಲೆಗಳಲ್ಲಿ ಸಂಗ್ರಹವಾಗುವ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ ನಿವೃತ್ತ ಸೈನಿಕರ ನೇಮಕ, ವಾಹನ ಖರೀದಿ ಹಾಗೂ ಇತರ ವೆಚ್ಚಗಳನ್ನು ಭರಿಸಲಾಗುತ್ತದೆ. 2022-23 ಆರ್ಥಿಕ ಸಾಲಿನಲ್ಲಿ ‘ಖನಿಜ ರಕ್ಷಣಾ ಪಡೆ’ ದಾಖಲಿಸಿದ ಪ್ರಕರಣಗಳು, ವಿಧಿಸಿದ ಮತ್ತು ವಸೂಲಿ ಮಾಡಿದ ದಂಡ ಹಾಗೂ ರಾಜಸ್ವ ಹೆಚ್ಚಳ ಮಾಹಿತಿಯನ್ನು ಇಲಾಖೆ ನಿರ್ದೇಶಕರಿಗೆ ನೀಡಬೇಕೆಂದು ನಿಯಮ ರೂಪಿಸಲಾಗಿದೆ.
ನಿಯಮ ಏನಿದೆ?: ಮೈನ್ಸ್ ಆಂಡ್ ಮಿನರಲ್ಸ್ ಕಾಯ್ದೆ (ಎಂಎಂಡಿಆರ್) 1957ರ ಸೆಕ್ಷನ್ 23ಸಿ ಅನ್ವಯ ಅಕ್ರಮ ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಟ ನಿಯಂತ್ರಣಕ್ಕೆ ಬೇಕಾಗಿರುವ ನಿಯಮಾವಳಿ ರೂಪಿಸಿಕೊಳ್ಳುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಕೊಡಲಾಗಿದೆ. ಅಕ್ರಮ ಗಣಿಗಾರಿಕೆ ನಿಯಂತ್ರಿಸುವ ಜವಾಬ್ದಾರಿ ರಾಜ್ಯ ಸರ್ಕಾರ ಆಡಳಿತ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅದರಂತೆ ಅರಣ್ಯ ಸಂರಕ್ಷಣೆ ಕಾಯ್ದೆ 1980 2(1) ಮತ್ತು 2(3) ಹಾಗೂ ಅರಣ್ಯ ಸಂರಕ್ಷಣಾ ಕಾನೂನು 2003 (6) ಹಾಗೂ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಬಳಿಕ ಗುತ್ತಿಗೆ ಆಧಾರದಲ್ಲಿ ಗಣಿಗಾರಿಕೆ ನಡೆಯಬೇಕು.