ಸೌರ ಪಂಪ್​ಸೆಟ್​ಗಳ ವಿದ್ಯುತ್ ಜಾಲ ಕಡಿತ; ಎಸ್ಕಾಂಗಳಿಗೆ ಸರ್ಕಾರದ ಕಟ್ಟುನಿಟ್ಟಿನ ಸೂಚನೆ

Solar pumpsets
Published on

ಬೆಂಗಳೂರು: ಕೇಂದ್ರ ಸರ್ಕಾರದ ಕುಸುಮ್​ಬಿ ಪ್ರೋತ್ಸಾಹಕ ಯೋಜನೆಯಡಿ ರೈತರು ತಮ್ಮದೇ ಆದ ಸೌರಶಕ್ತಿ ಚಾಲಿತ ನೀರಾವರಿ ಪಂಪ್​ಸೆಟ್ ಹೊಂದಿದ ನಂತರ ವಿದ್ಯುತ್ ಜಾಲದ ಸಂಪರ್ಕ ಕಡಿತವಾಗಲಿದೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ರಾಜ್ಯ ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಹಸಿರು ಇಂಧನದ ಮೇಲೆ ಅವಲಂಬನೆಗೆ ಒತ್ತಾಸೆ ನೀಡಿದೆ.

ಈಗಾಗಲೆ ಸಕ್ರಮಗೊಳಿಸಿದ ಅಂದಾಜು ಎರಡು ಲಕ್ಷ ನೀರಾವರಿ ಪಂಪ್​ಸೆಟ್​ಗಳ ಮೂಲಸೌಲಭ್ಯಕ್ಕೆ ಎಸ್ಕಾಂಗಳು ವೆಚ್ಚ ಮಾಡಿದ 6,999 ಕೋಟಿ ರೂ. ಭರಿಸಲು ಒಪ್ಪಿಗೆ ನೀಡಿ, ಸೆ.22ರ ನಂತರ ಅನಧಿಕೃತ ಪಂಪ್​ಸೆಟ್​ಗಳನ್ನು ಸಕ್ರಮಗೊಳಿಸದಿರಲು ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂಧನ ಇಲಾಖೆ ನಿರ್ದೇಶನಗಳನ್ನು ನೀಡಿದೆ.

ನೀರಾವರಿ ಪಂಪ್​ಸೆಟ್​ಗಳನ್ನು ವಿದ್ಯುತ್ ಜಾಲಕ್ಕೆ ವ್ಯವಸ್ಥಿತವಾಗಿ ಸೇರ್ಪಡೆಗೊಳಿಸಿ, ಸೌರ ವಿದ್ಯುತ್ ಸಮರ್ಪಕ ಬಳಕೆಗೆ ವಿದ್ಯುತ್ ಜಾಲರಹಿತವಾಗಿ ಪ್ರತ್ಯೇಕ ಸೌರಶಕ್ತಿ ಚಾಲಿತ ಐಪಿ ಸೆಟ್​ಗಳನ್ನು ಅಳವಡಿಸಬೇಕು. ಸಕ್ರಮಗೊಳಿಸಿದ ಕೃಷಿ ಪಂಪ್​ಸೆಟ್​ಗಳಿಗೆ 2022-23 ಮತ್ತು 2023-24ರಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕರೆದಿರುವ ಟೆಂಡರ್ ಅಂದಾಜುಪಟ್ಟಿ ಪುನರ್ ಪರಿಶೀಲಿಸಿ, ಪಂಪ್​ಸೆಟ್​ಗಳು ಹಾಲಿ ವಿದ್ಯುತ್ ಜಾಲದಿಂದ 500 ಮೀಟರ್​ನಿಂದಾಚೆ ಇದ್ದಲ್ಲಿ ಸ್ಟಾ್ಯಂಡ್ ಅಲೋನ್ ಅಥವಾ ಜಾಲರಹಿತ ಸೋಲಾರ್ ಪಂಪ್ ಅಳಡಿಸಬೇಕು. ಪಂಪ್​ಸೆಟ್​ಗಳು ಚಾಲ್ತಿ ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿದ್ದರೆ ಕನಿಷ್ಠ ಅವಶ್ಯಕತೆಗೆ ತಕ್ಕಂತೆ ಟೆಂಡರ್ ಕಾಮಗಾರಿ ಅನುಷ್ಠಾನಕ್ಕೆ ತರಬೇಕು ಎಂದು ಇಂಧನ ಇಲಾಖೆ ತಿಳಿಸಿದೆ.

ಗಣತಿಗೆ ತಾಕೀತು: ಸೌರ ಪಂಪ್​ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರುತು ಮಾಡಿ 10 ಎಚ್​ಪಿ ಸಾಮರ್ಥ್ಯಕ್ಕೆ ಮಿತಿಗೊಳಿಸುವುದು. ಆದಾಗ್ಯೂ ಎಂಎನ್​ಆರ್​ಇ ಷರತ್ತುಗಳ ಪ್ರಕಾರ 7.5 ಎಚ್​ಪಿ ಸಾಮರ್ಥ್ಯಕ್ಕೆ ಸಬ್ಸಿಡಿ/ಅನುದಾನ ಸೀಮಿತವಾಗಿರುತ್ತದೆ. ಕೆಇಆರ್​ಸಿ ನಿಗದಿಪಡಿಸಿದ ಗಡುವಿನೊಳಗೆ ಐಪಿ ಸೆಟ್​ಗಳನ್ನು ಗಣತಿ ಮಾಡಿ, ಅವುಗಳನ್ನು ಆಯಾ ರೈತರ ಆಧಾರ್ ಸಂಖ್ಯೆಗೆ ಜೋಡಣೆ ಮಾಡಬೇಕು. ಇಲಾಖೆಯಿಂದ ಇಲಾಖೆಗೆ ಶುಲ್ಕರಹಿತ ವರ್ಗಾವಣೆ ಆಧಾರದಲ್ಲಿ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಪಡೆದು, ವಿದ್ಯುತ್ ಉಪಕೇಂದ್ರದ ಬಳಿಕ ರೆಸ್ಕೋ ಮಾದರಿ ಪ್ರಕಾರ ಕುಸುಮ್​ಸಿ ಅಡಿ ಫೀಡರ್ ಸೌರೀಕರಣ ಅನುಷ್ಠಾನಗೊಳಿಸಲು ಇಲಾಖೆ ಆದೇಶಿಸಿದೆ.

ರೈತರದೇ ಜವಾಬ್ದಾರಿ: ಸೆ.22ರ ನಂತರ ಹೊಸದಾಗಿ ನೋಂದಣಿಯಾಗುವ ನೀರಾವರಿ ಪಂಪ್​ಸೆಟ್​ಗಳಿಗೆ ರೈತರು ಸ್ವಂತ ವೆಚ್ಚದಲ್ಲಿ ಮೂಲಸೌಲಭ್ಯ ಕಲ್ಪಿಸಿಕೊಳ್ಳಬೇಕು ಎಂದು ಇಂಧನ ಇಲಾಖೆ ಆದೇಶಿಸಿದೆ. ಸೌರಶಕ್ತಿಚಾಲಿತ ಪಂಪ್​ಸೆಟ್​ಗಳಿಗೆ ಕೇಂದ್ರ ಸರ್ಕಾರ ಶೇ.30ರಷ್ಟು ಸಹಾಯಧನ ಜತೆಗೆ ರಾಜ್ಯ ಸರ್ಕಾರದ ಸಬ್ಸಿಡಿ ಶೇ.30 ರಿಂದ 50ಕ್ಕೆ ಏರಿಸಲಾಗಿದೆ. ಉಳಿದ ಶೇ.20ರಷ್ಟು ಮೊತ್ತವನ್ನು ರೈತರು ವಂತಿಗೆಯಾಗಿ ನೀಡಬೇಕು. ರೈತರು ಈಗಾಗಲೇ ವಿದ್ಯುತ್ ಸಂಪರ್ಕಕ್ಕೆ ಮೊತ್ತವನ್ನು ಪಾವತಿಸಿದ್ದರೆ, ಅದೇ ಮೊತ್ತವನ್ನು ರೈತರ ವಂತಿಗೆ ಎಂದು ಪರಿಗಣಿಸಿ ಸೌರ ಪಂಪ್​ಸೆಟ್​ಗಳನ್ನು ಅಳವಡಿಸಲು ಎಸ್ಕಾಂಗಳಿಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net