

Software Engineer : ಪ್ರೀತಿ ಮಾಡಿ, ಮದುವೆಯಾಗುವುದಾಗಿ ನಂಬಿಸಿ, ಯುವತಿಯೊಂದಿಗೆ ಚೆಲ್ಲಾಟವಾಡಿದ ನಂತರ ಟೆಕ್ಕಿಯೊಬ್ಬ ಆಕೆಗೆ ವಂಚನೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಪೊಲೀಸರು ನೀಡಿದ ವಿವರಗಳ ಪ್ರಕಾರ, ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 10ರ ಗಾಯತ್ರಿ ಹಿಲ್ಸ್‌ನ ನಿವಾಸಿ ಸಾಯಿ ಪ್ರಣೀತ್ (26) ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆತ ಬೆಂಗಳೂರಿನಲ್ಲಿದ್ದಾಗ 2023ರಲ್ಲಿ ಯುವತಿಯೊಬ್ಬಳನ್ನು ಭೇಟಿಯಾದನು. ಇದೇ ಭೇಟಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುವಂತೆ ಮಾಡಿತು. ಬಳಿಕ ಇಬ್ಬರೂ ಒಂದೇ ಹಾಸ್ಟೆಲ್ನಲ್ಲಿ ಪೇಯಿಂಗ್ ಗೆಸ್ಟ್‌ಗಳಾಗಿ ನೆಲೆಸಿದ್ದರು.
ಇದರ ನಡುವೆ ಸಾಯಿ ಪ್ರಣೀತ್, ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ಆಕೆಯ ಜತೆ ದೈಹಿಕ ಸಂಬಂಧ ಸಹ ಬೆಳೆಸಿದನು. ಹೀಗಿರುವಾಗ ಸಾಯಿ ಪ್ರಣೀತ್, ಬೆಂಗಳೂರು ತೊರೆದು ಹೈದರಾಬಾದ್ನ ಗಾಯತ್ರಿ ಹಿಲ್ಸ್ಗೆ ಸ್ಥಳಾಂತರಗೊಂಡನು. ನನ್ನ ಸಹೋದರಿಯ ಮದುವೆಯ ಮುಗಿದ ನಂತರ ನಮ್ಮ ಮದುವೆ ನಡೆಯಲಿದೆ ಎಂದು ಯುವತಿಗೆ ಹೇಳಿ, ಆಕೆಯ ಮನವೊಲಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಗಾಯತ್ರಿ ಹಿಲ್ಸ್ಗೆ ಸಾಯಿ ಪ್ರಣೀತ್ ಹೊರಟುಹೋದನು.
ತುಂಬಾ ದಿನಗಳವರೆಗೂ ಮದುವೆಯ ಬಗ್ಗೆ ಸಾಯಿ ಪ್ರಣೀತ್ ಮಾತೇ ಆಡಲಿಲ್ಲ. ಯುವತಿ ಮಾತ್ರ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದಳು. ತನ್ನ ಸಹೋದರಿಯ ಮದುವೆಯ ಫೋಟೋಗಳನ್ನು ಕಳುಹಿಸಲು ಕೇಳಿದಾಗ, ಸಾಯಿ ಪ್ರಣೀತ್ ಕೆಲವು ಫೋಟೋಗಳನ್ನು ಕಳುಹಿಸಿದನು. ಆ ಫೋಟೋಗಳನ್ನು ನೋಡಿದ ನಂತರ ಸಂತ್ರಸ್ತೆ ಅನುಮಾನಗೊಂಡು ಆತನ ಮೇಲೆ ಹೆಚ್ಚು ಮದುವೆಯಾಗುವಂತೆ ಒತ್ತಡ ಹೇರಲು ಪ್ರಾರಂಭಿಸಿದಳು.
ಒತ್ತಡ ಹೆಚ್ಚಾದಂತೆ ಎರಡು ದಿನಗಳ ಹಿಂದೆ, ಸಾಯಿ ಪ್ರಣೀತ್, ಸಂತ್ರಸ್ತೆಯ ಕೋಣೆಗೆ ಹೋಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಸಂತ್ರಸ್ತೆಯ ಕುತ್ತಿಗೆ ಹಿಡಿದು ದೂರ ತಳ್ಳಿದ್ದಾನೆ. ಇಷ್ಟು ದಿನ ನನ್ನೊಂದಿಗೆ ಸುತ್ತಾಡಿದ್ದಕ್ಕಾಗಿ ಬಹುಮಾನವಾಗಿ 20 ಲಕ್ಷ ರೂ. ನೀಡುವುದಾಗಿ ಹೇಳಿ, ಸಂಬಂಧವನ್ನು ಮರೆತುಬಿಡುವಂತೆ ಕೇಳಿದ್ದಾನೆ.
ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಸಂತ್ರಸ್ತೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)