

Animals : ಕೃತಕ ಬುದ್ಧಿಮತ್ತೆ (AI- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಾಧನ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದೆ. ಈ AI ಎಷ್ಟು ಆಧುನಿಕವಾಗಿದೆ ಅಂದರೆ ಜನರು ಹೆಚ್ಚು ಶ್ರಮವಹಿಸದೇ ಎಲ್ಲ ಬಗೆಯ ಫೋಟೋ ಮತ್ತು ವಿಡಿಯೋಗಳನ್ನು ರಚಿಸಬಹುದು. ಭವಿಷ್ಯದಲ್ಲಿ ವಸ್ತುಗಳು ಅಥವಾ ವ್ಯಕ್ತಿಗಳು ಹೇಗೆ ಕಾಣುತ್ತಾರೆ ಎಂಬುದನ್ನು ಸಹ AI ಮೂಲಕ ಊಹಿಸಿಕೊಳ್ಳಬಹುದು. ಅಲ್ಲದೆ, ತಮ್ಮ ಕಲ್ಪನೆ ಹಾಗೂ ಇಷ್ಟದ ಪಾತ್ರವನ್ನು ಪ್ರಮುಖ ವ್ಯಕ್ತಿಗಳ ಮೇಲೆ ರಚಿಸಬಹುದು.
ಈ 21ನೇ ಶತಮಾನದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಗತ್ತಿನಲ್ಲಿ ಅತಿ ದೊಡ್ಡ ಬದಲಾವಣೆ ಮತ್ತು ಪರಿಣಾಮವನ್ನು ಉಂಟುಮಾಡುತ್ತಿದೆ. ನಾವು ಊಹಿಸಲೂ ಸಾಧ್ಯವಾಗದಷ್ಟು ಕೆಲಸಗಳು ಕ್ಷಣಾರ್ಧದಲ್ಲಿ ಪೂರ್ಣಗೊಳ್ಳುತ್ತಿವೆ ಎಂಬುದು ಆಶ್ಚರ್ಯಕರವಾಗಿದೆ. ಮುಂದೆ ಎಲ್ಲಾ ಕ್ಷೇತ್ರಗಳನ್ನು ಇದೇ ಎಐ ಟೆಕ್ನಾಲಜಿ ಆವರಿಸಿಕೊಂಡರೆ ಅಚ್ಚರಿಪಡಬೇಕಿಲ್ಲ.
ಪ್ರಾಣಿಗಳು ಮನುಷ್ಯರಂತೆ ನಡೆದರೆ ಹೇಗಿರುತ್ತದೆ ಎಂದು ನೀವು ಊಹಿಸಬಲ್ಲಿರಾ? ಇದು ಸ್ವಲ್ಪ ಕಷ್ಟವಾಗಬಹುದು. ಆದರೆ, ಕೃತಕ ಬುದ್ಧಿಮತ್ತೆ (AI) ಆ ಕಲ್ಪನೆಗಳನ್ನು ನನಸಾಗಿಸುತ್ತಿದೆ. ಮನುಷ್ಯರು ಸಹ ಊಹಿಸಲು ಸಾಧ್ಯವಾಗದ ವಿಲಕ್ಷಣ ವಿಡಿಯೋಗಳನ್ನು ರಚಿಸುವ ಮೂಲಕ ಎಐ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬ ಎಐಗೆ ಪ್ರಾಣಿಗಳು ಜನರಂತೆ ನಡೆದರೆ ಹೇಗಿರುತ್ತದೆ? ಎಂದು ಕೇಳಿದನು. ತಕ್ಷಣವೇ, ಕೃತಕ ಬುದ್ಧಿಮತ್ತೆ ಒಂದು ಪವಾಡವನ್ನೇ ಸೃಷ್ಟಿ ಮಾಡಿದ್ದು, ಪ್ರಾಣಿಗಳು ನಿಜವಾಗಿಯೂ ಮನುಷ್ಯರಂತೆ ನಡೆದರೆ ಹೇಗಿರುತ್ತದೆ ಎಂಬುದನ್ನು ವಿಡಿಯೋ ಮೂಲಕ ತೋರಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸಿಕ್ಸ್ ಪ್ಯಾಕ್ ದೇಹವನ್ನು ಹೊಂದಿರುವ ಜೆರ್ಸಿ ಹಸು, ದೊಡ್ಡ ಕೊಂಬುಗಳನ್ನು ಹೊಂದಿರುವ ಆನೆ, ಜಿರಾಫೆ, ಸಿಂಹ, ತೋಳ, ಹದ್ದು, ಮೊಸಳೆ, ಕಾಳಿಂಗ ಸರ್ಪ, ಖಡ್ಗಮೃಗ, ಆಮೆ, ಬೆಕ್ಕು, ಜೀಬ್ರಾ, ಮೇಕೆ ಹಾಗೂ ಉಡ ಮನುಷ್ಯನಂತೆ ಬೀಚ್ನಲ್ಲಿ ಆರಾಮವಾಗಿ ನಡೆಯುವುದನ್ನು ನೋಡುವುದು ತುಂಬಾ ವಿಚಿತ್ರ ಮತ್ತು ತಮಾಷೆಯಾಗಿದೆ. ಅಲ್ಲದೆ, ಅಚ್ಚರಿಯನ್ನು ಸಹ ಉಂಟು ಮಾಡಿದೆ.
ಸದ್ಯ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಬಗೆ ಬಗೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)