ಇಂಡೋ-ಪಾಕ್​​ ಕ್ರಿಕೆಟ್​ ಕದನಕ್ಕೂ ಮುಂಚೆಯೇ ಶಾಕಿಂಗ್​ ಹೇಳಿಕೆ ನೀಡಿದ ಶಾಹಿದ್ ಅಫ್ರಿದಿ! Champions Trophy

Champions Trophy
Published on

Champions Trophy : ವಿಶ್ವ ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಿರುವ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳು ಈ ಸಾಂಪ್ರದಾಯಿಕ ಎದುರಾಳಿಗಳ ಹಣಾಹಣಿಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಈ ಎರಡೂ ತಂಡಗಳು ಎಲ್ಲಿಗೇ ಹೋದರೂ, ಕ್ರೀಡಾಂಗಣ ಮಾತ್ರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿರುತ್ತದೆ. ಈ ಹಳೆಯ ಪ್ರತಿಸ್ಪರ್ಧಿಗಳು ಇದೀಗ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಲಿವೆ. ಫೆಬ್ರವರಿ 23ರಂದು ನಡೆಯುವ ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ವೇದಿಕೆಯಾಗಲಿದೆ. ಇದಕ್ಕೂ ಮುನ್ನವೇ ಪಾಕಿಸ್ತಾನದ ದಿಗ್ಗಜ ಆಟಗಾರ ಶಾಹಿದ್ ಅಫ್ರಿದಿ ಇಂಡೋ-ಪಾಕ್​ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿ ಮಾಜಿ ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ ಮತ್ತು ಯುವರಾಜ್ ಸಿಂಗ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿಂದಿನ ಕ್ರಿಕೆಟಿಗರು ಮತ್ತು ಪ್ರಸ್ತುತ ಕ್ರಿಕೆಟಿಗರ ಬಗ್ಗೆ ಅಫ್ರಿದಿ ಮಾತನಾಡಿದರು.

ಈ ಹಿಂದಿನ ಆಟಗಾರರಲ್ಲಿ ಇದ್ದ ಪೈಪೋಟಿ, ಆಕ್ರಮಣಶೀಲತೆ ಮತ್ತು ಉತ್ಸಾಹ ಇಂದಿನ ಭಾರತೀಯ ಮತ್ತು ಪಾಕಿಸ್ತಾನಿ ಆಟಗಾರರಲ್ಲಿ ಇಲ್ಲ ಎಂದು ಶಾಹಿದ್​ ಅಫ್ರಿದಿ ಹೇಳಿದರು. ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ನಾವು ನೋಡುತ್ತಿದ್ದ ರೀತಿಯ ತೀವ್ರ ಸ್ಪರ್ಧೆ ಈಗ ಕಾಣುತ್ತಿಲ್ಲ. ಈಗಿನ ಆಟಗಾರರು ಮೆಕ್‌ಡೊನಾಲ್ಡ್ಸ್ ಮತ್ತು ಕೆಎಫ್‌ಸಿ ಪೀಳಿಗೆಗೆ ಸೇರಿದವರು ಎಂದು ಅಫ್ರಿದಿ ಹೇಳಿದರು. ಇದೀಗ ಅಫ್ರಿದಿ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಅಂದಹಾಗೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಟೀಮ್ ಇಂಡಿಯಾ ಈಗಾಗಲೇ ದುಬೈ ತಲುಪಿದ್ದು, ಇಂದು (ಫೆ.20) ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ತಿಂಗಳ 23 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಆಡಲಿದೆ. ಎರಡೂ ದೇಶಗಳ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಭದ್ರತಾ ಕಾರಣಗಳಿಂದ ಭಾರತ ಆಡುವ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net