ಸಾಮಾಜಿಕ ಜಾಲತಾಣವನ್ನು ಜಾಗ್ರತೆಯಿಂದ ಬಳಸಿ

15 HDK01
Published on

ಎಚ್.ಡಿ.ಕೋಟೆ: ಯುವಪೀಳಿಗೆ ಮೌಲ್ಯಯುತ ಜೀವನ ರೂಢಿಸಿಕೊಂಡಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ತಿಳಿಸಿದರು.


ಪಟ್ಟಣದ ಬಿಜಿಎಸ್ ಕಲಾ ಭವನದಲ್ಲಿ ಶುಕ್ರವಾರ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಯುವ ಪೀಳಿಗೆ ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಬದುಕು ಹಾಳು ಮಾಡಿಕೊಳ್ಳುವ ಜತೆಗೆ ಸಮಾಜದಲ್ಲಿ ಕೆಟ್ಟ ವ್ಯಕ್ತಿಗಳಾಗಿ ರೂಪುಗೊಂಡು ದೇಶದ ಪ್ರಗತಿಗೆ ಮಾರಕವಾಗುತ್ತಿದ್ದಾರೆ. ವಿದ್ಯಾರ್ಥಿಗಳು ಓದಿನ ಕಡೆ ಒಲವು ತೋರಬೇಕು ಎಂದು ಸಲಹೆ ನೀಡಿದರು.


ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು ಪಾಲಕರು ತುಂಬಾ ಕಷ್ಟಪಡುತ್ತಾರೆ. ನಿಮ್ಮ ಕೌಟುಂಬಿಕ ಪರಿಸ್ಥಿತಿಯನ್ನು ಒಮ್ಮೆ ಅರಿತು ವಿದ್ಯಾಭ್ಯಾಸ ಮಾಡಿ. ಕುಟುಂಬದ ಜತೆ ಸಮಾಜದ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇಶ ಪ್ರಗತಿ ಕಾಣಬೇಕಾದರೆ ಕೌಟುಂಬಿಕ ಪರಿಸ್ಥಿತಿಯೂ ಸುಧಾರಣೆಯಾಗಬೇಕು ಎಂದು ಹೇಳಿದರು.


ಮೊಬೈಲ್ ಬಳಕೆ ನಮಗೆ ಪೂರಕವಾಗಿ ಇರಬೇಕೇ ಹೊರತು ಮಾರಕವಾಗಿರಬಾರದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಜಾಗ್ರತೆಯಿಂದ ಬಳಸಬೇಕು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಪರಾಧಗಳನ್ನು ತಡೆಯುವ ಕೆಲಸವನ್ನು ಯುವಪೀಳಿಗೆ ಮಾಡಬೇಕಿದೆ ಎಂದರು.


ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಕಾರಣ ಅಪರಾಧಗಳ ಸಂಖ್ಯೆ ಅಧಿಕವಾಗಿದೆ. ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮಾನ. ಹೆಚ್ಚು ಪುಸ್ತಕಗಳನ್ನು ಓದಿ. ನಮ್ಮ ವ್ಯಕ್ತಿತ್ವ, ನಮ್ಮ ಉಡುಗೆ, ತೊಡುಗೆ ಭಾಷೆಯ ಮೇಲಿರುತ್ತದೆ ಎಂದು ತಿಳಿಸಿದರು.


ಪ್ರೊ.ಚಂದ್ರೇಗೌಡ ಮಾತನಾಡಿ, ವಿದ್ಯಾಭ್ಯಾಸ ಪಡೆಯುವುದು ಜ್ಞಾನಕ್ಕಾಗಿ ಹೊರತು ಉದ್ಯೋಗಕ್ಕಾಗಿ ಅಲ್ಲ. ಒಳ್ಳೆಯ ವಿದ್ಯಾರ್ಥಿಗಳು ಮಾತ್ರ ದೇಶ ಕಟ್ಟಲು ಸಾಧ್ಯ. ಸರಳತೆ ಇದ್ದ ವ್ಯಕ್ತಿ ಏನನ್ನಾದರೂ ಸಾಧನೆ ಮಾಡುತ್ತಾನೆ. ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಅವರಂತ ಮಹಾನ್ ನಾಯಕರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.


ಪದವಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹಾಗೂ ವಿವಿಧ ರಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿಗೌಡ, ಭಾನುಮತಿ, ಸಂಗೀತ, ಮದನ್, ಸಹಾನಾಭಾಯಿ, ಹೇಮಂತ್, ಚಂದನ, ಅಪೂರ್ವ, ಅಶ್ವಿನಿ, ಕವಿತಾ, ಮಹಮದ್‌ಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.


ಪ್ರೊ.ಕೆ.ಪಿ.ಬಸವೇಗೌಡ, ಡಾ.ಎಂ.ಬಿ.ಸುರೇಶ್, ಪೊಲೀಸ್ ಇನ್ಸ್‌ಪೆಕ್ಟರ್ ಶಬೀರ್ ಹುಸೇನ್, ಪ್ರಾಂಶುಪಾಲ ಜಿ.ಎನ್.ವೆಂಕಟೇಶ್, ಉಪನ್ಯಾಸಕರಾದ ಕಲ್ಲೇಶಗೌಡ, ರಾಮಚಂದ್ರ, ಸಿದ್ದೇಗೌಡ, ಚನ್ನಕೇಶವ ನಾಯಕ, ರವೀಶ, ಸಿದ್ದರಾಜು, ಮಹಾದೇವು, ಮಹೇಂದ್ರ, ಅವಿನಾ, ಅಮೂಲ್ಯಾ, ಪ್ರೀತಿ, ಚಿಕ್ಕದೇವಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net