

ಬೆಂಗಳೂರು: ಸಾಮಾಜಿಕ ಜಾಲತಾಣ ಮೂಲಕ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿ, ಮದ್ಯದ ಬಾಟಲ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ನಗರದ ಪಶ್ಚಿಮ ವಲಯದ ಉಪ ಆಯುಕ್ತ ಬಿ.ಆರ್.ಹಿರೇಮಠ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಶುಕ್ರವಾರ (ಏ.10) ಸಂಜೆ 5ಕ್ಕೆ ಮಾಗಡಿ ಮುಖ್ಯರಸ್ತೆಯ ಕೆಎಚ್‌ಬಿ ಕಾಲನಿಯ ಮಾಂಸಾಹಾರಿ ಹೋಟೆಲ್ ಮುಂಭಾಗ ಕಾರ್ಯಾಚರಣೆ ನಡೆಸಿ ಮದ್ಯದ ಬಾಟಲ್ ಹಾಗೂ ದ್ವಿಚಕ್ರ ವಾಹನ ಜಫ್ತಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಸೋಷಿಯಲ್ ನೆಟ್‌ವರ್ಕ್ ಬಳಸಿ ಈತ ಮದ್ಯದ ಬಾಟಲ್‌ಗಳ ಚಿತ್ರ ಹಾಕಿ ಆಸೆ ಹುಟ್ಟಿಸುತ್ತಿದ್ದ. ಎಂಆರ್‌ಪಿಕ್ಕಿಂತ 3 ಪಟ್ಟು ದರ ನಿಗದಿ ಮಾಡುತ್ತಿದ್ದ. ಕರೆ ಮಾಡುವ ಗ್ರಾಹಕರಿಗೆ ಬೇಡಿಕೆ ಆಧಾರದಲ್ಲಿ ದರ ಏರಿಸುತ್ತಿದ್ದ. ಗೂಗಲ್, ಫೋನ್ ಪೇ ಮತ್ತಿತರರ ಆ್ಯಪ್ ಮೂಲಕ ಹಣ ಪಡೆದು ಮದ್ಯ ಒದಗಿಸುತ್ತಿದ್ದ.
ವಿಜಯನಗರ, ಆರ್‌ಪಿಸಿ ಲೇಔಟ್ ಮತ್ತಿತರರ ಪ್ರದೇಶಗಳನ್ನು ಡೆಲಿವರಿಗಾಗಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಈತ ಹೆಸರಾಂತ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂತಾದ ಸ್ಥಳಗಳಲ್ಲಿ ಮುಂಚಿತವಾಗಿ ತನ್ನ ಬೈಕ್‌ನಲ್ಲಿ ಓಡಾಡಿ ಅದರ ಆಸುಪಾಸಿನಲ್ಲಿ ಪ್ಯಾಕ್ ಮಾಡಿದ ಮದ್ಯದ ಬಾಟಲ್‌ಗಳನ್ನು ಇಡುತ್ತಿದ್ದ. ಅದರ ಮೇಲೆ ಹಳೇ ದಿನಪತ್ರಿಕೆ ಹಾಕಿ ಅದು ಹಾರಿ ಹೋಗದಂತೆ ಕಲ್ಲು ಇಡುತ್ತಿದ್ದ. ನಂತರ ಗಿರಾಕಿಗೆ ಲೊಕೇಷನ್ ಕಳುಹಿಸಿ ಮದ್ಯ ಸರಬರಾಜು ಮಾಡುತ್ತಿದ್ದ.
ಪೊಲೀಸ್ ಕಾರ್ಯಾಚರಣೆ ಹೇಗೆ?
ದೂರಿನ ಹಿನ್ನೆಲೆಯಲ್ಲಿ ಇದಕ್ಕಾಗಿ ತಂಡ ರಚಿಸಿ ಗಿರಾಕಿಯಂತೆ ಈತನನ್ನು ಸಂಪರ್ಕಿಸಿದಾಗ ಮದ್ಯದ ದರ ಏರಿಸಿದ್ದ. ನಿರೀಕ್ಷಿತ ದರಕ್ಕೆ ಒಪ್ಪದಿದ್ದರೆ ಬೇರೆ ಗಿರಾಕಿ ಮಾರುತ್ತಿದ್ದ. ಗಿರಾಕಿ ಮಾತನಾಡುವ ಮೊಬೈಲ್ ಸಂಖ್ಯೆಯನ್ನು ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿ ಖಚಿತ ಪಡಿಸಿಕೊಳ್ಳುತ್ತಿದ್ದ ಈತ, ಒಂದು ವೇಳೆ ಟ್ರೂ ಕಾಲರ್‌ನಲ್ಲಿ ಅಧಿಕಾರಿ ಅಥವಾ ಇಲಾಖೆಯ ಹೆಸರು ತೋರಿಸಿದರೆ ವ್ಯವಹಾರ ಬಂದ್ ಅಥವಾ ಪೋನ್ ಸ್ವಿಚ್ಡ್ ಆಫ್ ಮಾಡುತ್ತಿದ್ದ. ಬಳಿಕ ಅಬಕಾರಿ ಇಲಾಖೆ ಉಪ ಆಯುಕ್ತ ಎಂದು ಪರಿಚಯಿಸಿಕೊಂಡು ಬೇರೆ ಸಂಖ್ಯೆಯಿಂದ ಮಾತನಾಡಿ ಕಚೇರಿ ಅಥವಾ ಪೊಲೀಸ್ ಠಾಣೆ ಸಮೀಪದ ಲೊಕೇಷನ್ ಬಳಸದೆ ವ್ಯವಹಾರ ಕುದುರಿಸುತ್ತಿದ್ದ. ಈತ ಓಡಾಡುತ್ತಿದ್ದ ಬೈಕ್ ನಂಬರ್ ಪತ್ತೆ ಹೆಚ್ಚಿ ಮದ್ಯದ ಬಾಟಲ್ ಇಟ್ಟುಕೊಂಡು ಅಡಗಿ ನಿಂತಿದ್ದಾಗ ದಾಳಿ ನಡೆಸಲಾಯಿತು. ದಾಳಿ ವೇಳೆ ವಶಪಡಿಸಿಕೊಂಡಿದ್ದ ಮದ್ಯ ಮೊಬೈಲ್ನಲ್ಲಿ ಗೂಗಲ್ ಹಾಗೂ ಪೋನ್ ಪೇನಲ್ಲಿ ಗಿರಾಕಿಗಳು ಹಣ ಪಾವತಿಸಿದ ಬಗ್ಗೆ ಪರಿಶೀಲಿಸಿ ಖಚಿತ ಪಡಿಸಿಕೊಂಡು ಬಂಧಿಸಲಾಯಿತು. ಈತನ ಬಂಧನಕ್ಕಾಗಿ ಮಹಿಳಾ ಅಧಿಕಾರಿಯನ್ನು ಗೃಹಿಣಿ, ತರಕಾರಿ ಹಾಗೂ ಹಾಲು ಹುಡುಕುವರಂತೆ ನಿಯೋಜಿಸಲಾಗಿತ್ತು ಎಂದು ಪಶ್ಚಿಮ ವಲಯದ ಉಪ ಆಯುಕ್ತ ಬಿ.ಆರ್.ಹಿರೇಮಠ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.