

ಪಿರಿಯಾಪಟ್ಟಣ: ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಮುತ್ತೂರು ರಾಜೀವ್ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಚಿಟ್ಟೆನಹಳ್ಳಿ ವಲಯ ಸ್ವಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರು ಹೆಚ್ಚು ನೈಸರ್ಗಿಕ ಸಂಪತ್ತನ್ನು ನೀಡಿದ್ದಾನೆ. ಅದನ್ನು ಉಪಯೋಗಿಸಿಕೊಂಡು ನಾವು ಮನುಷ್ಯರಾಗಿ ಬದುಕಬೇಕಾಗಿದೆ ಎಂದರು.
40 ವರ್ಷಗಳ ಹಿಂದೆ ಹೇಮಾವತಿ ಹೆಗ್ಗಡೆ ಮತ್ತು ವೀರೇಂದ್ರ ಹೆಗ್ಗಡೆ ದಂಪತಿ ಧರ್ಮಸ್ಥಳದಲ್ಲಿ ಆರಂಭಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ರಾಜ್ಯಾದ್ಯಂತ ಪಸರಿಸಿದೆ. ಒಕ್ಕೂಟದ ಸದಸ್ಯರಿಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವನ್ನು ನೀಡುವ ಮೂಲಕ ರೈತರು ಮತ್ತು ಮಹಿಳೆಯರಿಗೆ ಆಶಾದಾಯಕವಾದ ವಾತಾವರಣ ನಿರ್ಮಿಸಿದೆ. ಸಂಸ್ಥೆಯು ಯಾವುದೇ ಗ್ಯಾರಂಟಿ ಪಡೆಯದೆ ಸಾಲ ಸೌಲಭ್ಯ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಸಂಸ್ಥೆಯ ನೆರವನ್ನು ಉಪಯೋಗಿಸಿಕೊಂಡು ಸಮಾಜದ ಅಭಿವೃದ್ಧಿ ಆಗಬೇಕಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ಮಾತನಾಡಿ, ಆರಂಭಿಕ ದಿನಗಳಲ್ಲಿ ಸಂಸ್ಥೆಗೆ ಕೇವಲ ಹಣಕಾಸು ಒದಗಿಸುವುದೊಂದೆ ಮಾನದಂಡವಾಗಿತ್ತು, ಬಳಿಕ ರಾಜ್ಯದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ರಾಜ್ಯದ ವಿವಿಧೆಡೆ 500ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ ಎಂದರು.
ಮುಖಂಡರಾದ ರವಿ, ನಂದೀಶ್, ಷಣ್ಮುಖ ರಾವ್, ಕೆ.ಸಿ.ಜಯಕುಮಾರ್, ಬಸವಣ್ಣ, ಲೀಲಾವತಿ, ಮೂರ್ತಿ, ಅರುಣ, ವಸಂತಕುಮಾರ್, ಶಿವರಾಜ್, ಮಹದೇವ್, ಮೋಹನ್, ಪೂಜಾರ್, ಮೇಲ್ವಿಚಾರಕಿಯರಾದ ಪದ್ಮಾ, ರೋಜಾ, ದಿವ್ಯಾ, ಪುಷ್ಪಾ, ಪೂರ್ಣಿಮಾ, ಅನು, ಭೂಮಿಕಾ ಮತ್ತಿತರರು ಉಪಸ್ಥಿತರಿದ್ದರು.