

ತಿ.ನರಸೀಪುರ: ಎಲ್ಲ ವರ್ಗದ ಜನರಿಗೂ ಬ್ಯಾಂಕಿಂಗ್ ಸೇವೆ ಒದಗಿಸುವ ಮೂಲಕ ಕೆನರಾ ಬ್ಯಾಂಕ್ 118 ವರ್ಷಗಳ ಸಾರ್ಥಕ ಸೇವೆ ಪೂರೈಸಿದೆ ಎಂದು ಕೆನರಾ ಬ್ಯಾಂಕ್‌ನ ಮೈಸೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಪಿ.ಎಸ್.ಉಮೇಶ್ ಹೇಳಿದರು.
ಇತ್ತೀಚೆಗೆ ತಾಲೂಕಿನ ಬನ್ನೂರು ಪಟ್ಟಣದ ಪುರಸಭೆ ಕಚೇರಿ ಎದುರು ಆರಂಭಿಸಿರುವ ಕೆನರಾ ಬ್ಯಾಂಕ್ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೆನರಾ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ, ಆರ್ಥಿಕ ವ್ಯವಹಾರಕಷ್ಟೇ ಸೀಮಿತವಾಗದೆ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಹಿಂದೆ ಗ್ರಾಹಕರು ಮೈಸೂರು ಬಿಟ್ಟರೆ ಮಳವಳ್ಳಿ, ಕಿರುಗಾವಲು ಹಾಗೂ ತಿ.ನರಸೀಪುರ ಶಾಖೆಯನ್ನು ಅವಲಂಬಿಸಬೇಕಿತ್ತು. ಈಗ ಪಟ್ಟಣದಲ್ಲೇ ಶಾಖೆ ತೆರೆದಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಕನ್ನಡ ಭಾಷೆಯಲ್ಲೇ ವ್ಯವಹರಿಸುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಬನ್ನೂರು ಶಾಖೆಯ ಪ್ರಬಂಧಕ ಬಿ.ಎ.ಹಂಸ ಮಾತನಾಡಿ, ಕೇಂದ್ರ ಸರ್ಕಾರದ ಜನ್ ಧನ್, ಪಿಎಂಜೆಡಿವೈ ಸೇವೆಯನ್ನು ಬ್ಯಾಂಕ್‌ನಿಂದ ನೀಡಲಾಗುತ್ತಿದೆ. ಸಾರ್ವಜನಿಕರು ಇವುಗಳ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಆರ್.ಹೇಮಂತ್‌ಕುಮಾರ್ ನೂತನ ಶಾಖೆ ಉದ್ಘಾಟಿಸಿದರು. ವಿಭಾಗೀಯ ವ್ಯವಸ್ಥಾಪಕರಾದ ಅನಿಲ್, ಮೋಹನ್, ಕ್ಷೇತ್ರೀಯ ಕಾರ್ಯಾಲಯದ ವಿಭಾಗೀಯ ವ್ಯವಸ್ಥಾಪಕ ಸಾಂಬಶಿವರಾವ್, ವ್ಯವಸ್ಥಾಪಕ ವಿನಯ್ ರಾವತ್ ಸಿಂಗ್, ಬ್ಯಾಂಕ್ ಅಧಿಕಾರಿ ಎಂ.ಎಂ.ನಾಗೇಶ್, ಕೃಷ್ಣ ಮೂರ್ತಿ, ಮಂಜು ಮತ್ತಿತರರಿದ್ದರು.