

ನವದೆಹಲಿ: ಕರೊನಾ ಕೋವಿಡ್ -19 ವೈರಸ್ ಸೋಂಕು ಪತ್ತೆಗೆ ಪಾಲಿಮರೇಸ್ ಚೇನ್ ರಿಯಾಕ್ಷನ್(ಪಿಸಿಆರ್) ಟೆಸ್ಟ್ ಅಥವಾ ಇನ್ಯಾವುದೇ ಟೆಸ್ಟ್ಗಿಂತ ಉತ್ತಮ ಫಲಿತಾಂಶವನ್ನು ಸ್ನಿಫರ್ ನಾಯಿಗಳು ಕೊಡಬಲ್ಲವು. ಸ್ನಿಫರ್ ನಾಯಿಗಳ ಮೂಗು ಅಷ್ಟು ಸೂಕ್ಷ್ಮವಾಗಿದ್ದು, ಅವುಗಳು ಸೋಂಕು ಪೀಡಿತನನ್ನು ಪತ್ತೆ ಮಾಡಿದರೆ ಅದನ್ನು ಖಚಿತವಾಗಿ ನಂಬಬಹುದು ಎಂದು ಫಿನ್ಲೆಂಡ್ನ ಸಂಶೋಧಕರು ಹೇಳಿದ್ದಾರೆ.
ಸಾಮಾನ್ಯವಾಗಿ ಕರೊನಾ ವೈರಸ್ ಪತ್ತೆಗೆ ರಕ್ತ ಪರೀಕ್ಷೆ ಅಥವಾ ಗಂಟಲು ದ್ರವದ ಮೂಲಕ ಪಿಸಿಆರ್ ಪರೀಕ್ಷೆ ನಡೆಸಿ ದೃಢೀಕರಿಸಲಾಗುತ್ತದೆ. ಆದರೆ, ಫಿನ್ಲೆಂಡ್ನ ಹೆಲ್ಸೆನ್ಕಿ ಯೂನಿವರ್ಸಿಟಿಯ ಸಂಶೋಧಕರ ಅಧ್ಯಯನ ಪ್ರಕಾರ, ತರಬೇತಿ ಹೊಂದಿದ ಸ್ನಿಫರ್ ನಾಯಿಗಳಿದ್ದರೆ ಅವುಗಳು ಕರೊನಾ ಪೀಡಿತರ ಮೂತ್ರದ ವಾಸನೆ ನೋಡಿಯೇ ಪಾಸಿಟಿವ್, ನೆಗೆಟಿವ್ ದೃಢೀಕರಿಸಬಲ್ಲವು ಎಂದು ಹೇಳಿದ್ದಾರೆ.‘
ಇದನ್ನೂ ಓದಿ: VIDEO: ಮಾಸ್ಕ್ ಧರಿಸದೇ ರಸ್ತೆಗೆ ಇಳಿಯುವವರಾರು? ;)
ನಾಯಿಗಳು ಕ್ಯಾನ್ಸರ್ ಮತ್ತು ಇತರೆ ಕೆಲವು ರೋಗಗಳನ್ನು ಮುಂಚಿತವಾಗಿ ಗ್ರಹಿಸಿ ಮನುಷ್ಯರನ್ನು ಎಚ್ಚರಿಸಿದ ಘಟನೆಗಳು ನಮ್ಮ ನಡುವೆಯೇ ಇದೆ. ಹೀಗೆಯೇ ನಾಯಿಗಳನ್ನು ಕರೊನಾ ಪತ್ತೆಗೆ ಬಳಸುವಂತಾದರೆ ಎಷ್ಟು ಸುಲಭವಾದೀತು ಎಂದು ನಾವು ಅಚ್ಚರಿಪಟ್ಟಿದ್ದೆವು. ಅದೀಗ ಸಾಕಾರಗೊಂಡಿದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಅನ್ನಾ ಹೆಲ್ಮ್ ಜಾರ್ಕ್ಮನ್ ತಿಳಿಸಿದ್ದಾರೆ.
ನಾಯಿಗೆ ಕೋವಿಡ್ 19 ಸೋಂಕು ಪೀಡಿತರ ಸ್ಯಾಂಪಲ್ಸ್ ವಾಸನೆ ಮತ್ತು ಸೋಂಕು ರಹಿತರ ಸ್ಯಾಂಪಲ್ಸ್ ವಾಸನೆಯನ್ನು ಗ್ರಹಿಸುವುದಕ್ಕೆ ಇರಿಸಲಾಗಿತ್ತು. ಸ್ಪ್ಯಾನಿಶ್ ಗ್ರೇಹೌಂಡ್ ನಾಯಿ ಪಾಸಿಟಿವ್ ಸ್ಯಾಂಪಲ್ಸ್ ಅನ್ನು ಗುರುತಿಸಿ ತಿಳಿಸಿದೆ. ಇದನ್ನು ನಂಬಬಹುದು ಎಂದು ಜಾಕ್ಮನ್ ಪ್ರತಿಪಾದಿಸಿದ್ದಾರೆ. (ಏಜೆನ್ಸೀಸ್)