

ಬೈಂದೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಈ ಬಾರಿ ಶ್ರಾವಣ ಮಾಸದ ಎಲ್ಲ ಧಾರ್ಮಿಕ ಆಚರಣೆ ಸಂಭ್ರಮದಿಂದ ಜರುಗುತ್ತಿದೆ.
ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ, ರಾತ್ರಿ ಪೂಜೆ ನಡೆಯುತ್ತಿದೆ. ಎಲ್ಲ ಶನಿವಾರ ಭಜನೆ, ವಿಶೇಷ ಪೂಜೆ ನಡೆಸಲಾಗುತ್ತದೆ. ನಾಗರಪಂಚಮಿ, ನೂಲಹುಣ್ಣಿಮೆ, ವರಮಹಾಲಕ್ಷ್ಮೀ ವ್ರತಾಚರಣೆ, ಶ್ರೀಕೃಷ್ಣಾಷ್ಟಮಿ ಆಚರಿಸಲಾಗಿದೆ.
ಈ ಬಾರಿ ಪ್ರಥಮವಾಗಿ ಯುವ ಜಿಎಸ್‌ಬಿ ಸೇವಾ ಸಂಘ ವತಿಯಿಂದ ಸೆ.1ರಂದು ಸ್ನೇಹ-ಸಂಗಮ ಕುಟುಂಬ ಸಮ್ಮೇಳನ ಆಯೋಜಿಸಲಾಗಿದೆ. ಸಮಾಜದ ಮಹಿಳೆಯರು, ಪಾಲಕರು, ಮಕ್ಕಳಿಗೆ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಿರಾಲಿ ಎಸ್‌ಜಿಎಂ ದೇವಸ್ಥಾನ ಆಡಳಿತ ಮೊಕ್ತೇಸರ ಡಿ.ಗೋಪಿನಾಥ ಕಾಮತ್, ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ ಭಾಗವಹಿಸಲಿದ್ದಾರೆ. ಪರ್ಯಾಯ ಅರ್ಚಕರು ಆಶೀರ್ವಚನ ನೀಡಲಿದ್ದಾರೆ. ಭಜನ್ ಗಾಯಕ ಯು.ರಾಜೇಶ ಪಡಿಯಾರ್, ದೇವಳದ ಮಾಜಿ ಮ್ಯಾನೇಜರ್ ಬೆಳ್ಗಲ್‌ಕಟ್ಟೆ ರತ್ನಾಕರ ಪ್ರಭು ಅವರನ್ನು ಸನ್ಮಾನಿಸಲಾಗುವುದು.