

ಕೊಲ್ಲಂ: ಹಾವಿನಿಂದ ಕಚ್ಚಿಸಿ ಪತ್ನಿ ಕೊಲೆಗೈದ ಪ್ರಕರಣ ಕೇರಳದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಉತ್ತರಾ ಪತಿ ಸೂರಜ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಹಾವಿಗೆ ತಯಾರಿ ನೀಡಿದ್ದ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
ಪತ್ನಿ ಉತ್ತರಾಳನ್ನು ಹತ್ಯೆಗೈಯ್ಯುವ ಮುನ್ನ ಸೂರಜ್, ಬರೋಬ್ಬರಿ 11 ದಿನ ಹಾವನ್ನು ಬಾಟಲ್ ಒಂದರಲ್ಲಿ ಕೂಡಿಟ್ಟು ಆಹಾರ ನೀಡದೇ ಹಿಂಸಿಸಿ ಚೆನ್ನಾಗಿ ಹಸಿಯುವಂತೆ ಮಾಡಿದ್ದನಂತೆ. ಏಪ್ರಿಲ್ 24ರಿಂದ ಮೇ 6ರವರೆಗೂ ಹಾವನ್ನು ಬಾಟಲ್ನಲ್ಲೇ ಇಟ್ಟಿದೆ ಎಂದು ಸೂರಜ್ ಹೇಳಿದ್ದಾನೆ.
ಉತ್ತರ ದೇಹದ ಮೇಲೆ ಎಸೆಯುವ ಮುನ್ನ ಹಾವು ಸೂರಜ್ನತ್ತ ಹಿಶ್ ಎಂದು ಜೋರಾಗಿ ಶಬ್ದ ಮಾಡಿತ್ತಂತೆ. ಅದನ್ನು ಕೇಳಿ ತುಂಬಾ ಭಯವಾಯಿತು. ಮೇ 6ರ ಬೆಳಗ್ಗೆ 12ರಿಂದ 12:30ರ ಸಮಯದಲ್ಲಿ ಘಟನೆ ನಡೆಯಿತು. ಅದಕ್ಕೂ ಮುನ್ನ ಮಂಡಲದ ಹಾವನ್ನು ತಡರಾತ್ರಿ ಉತ್ತರ ಮೇಲೆ ಎಸೆದಿದ್ದೆ. ಆದರೆ, ಅದರಿಂದ ಏನು ಪ್ರಯೋಜನ ಆಗಲಿಲ್ಲ ಎಂದು ಆರೋಪಿ ಸೂರಜ್ ಬಾಯ್ಬಿಟ್ಟಿದ್ದಾನೆ.
ಇನ್ನು ಪ್ರಕರಣದಲ್ಲಿ ಸೂರಜ್ ತಾಯಿ ರೇಣುಕಾ ಹಾಗೂ ಸಹೋದರಿ ಸೂರ್ಯಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರೋ ತನಿಖಾಧಿಕಾರಿ, ಉತ್ತರಾಳನ್ನು ಕೊಲೆ ಮಾಡುವ ಬಗ್ಗೆ ಸೂರಜ್ ಕುಟುಂಬಕ್ಕೆ ತಿಳಿದಿರಲಿಲ್ಲ. ಆದಾಗ್ಯೂ ಸೂರಜ್ ಅನೇಕ ಬಾರಿ ಮನೆಗೆ ಹಾವನ್ನು ತಂದಿದ್ದ. ಆಕೆಯ ಆಭರಣಗಳನ್ನು ಎಲ್ಲಿ ಹೂತಿಟ್ಟಿದ್ದ ಎಂಬುದನ್ನು ಪತಿ ಸುರೇಂದ್ರನ್ ಕೆ ಪಂಚಿಕರ್ ರೇಣುಕಾರಿಗೆ ತಿಳಿಸಿದ್ದರಂತೆ. ಸೂರ್ಯ ತಮ್ಮ ಸಹೋದರನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಸೂರಜ್ ತಂದೆಯನ್ನು ವಶಕ್ಕೆ ಪಡೆದಿದ್ದು, ಅವರನ್ನು ವಿವಿಧ ಪ್ರದೇಶಗಳಿಗೆ ಕರೆದೊಯ್ದು ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. (ಏಜೆನ್ಸೀಸ್)