

ಬಿಹಾರ: ಮನುಷ್ಯ-ವನ್ಯಜೀವಿ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡ ಮಾನವನಿಗೆ ಬುದ್ಧಿಕಲಿಸಲು ಪ್ರಾಣಿಗಳು ನಾಡಿನತ್ತ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಆಹಾರ ಅರಸಿ ನಗರ ಪ್ರದೇಶಗಳಿಗೆ ಪ್ರಾಣಿಗಳು ಧಾವಿಸಿದಾಗ, ಮಾನವ-ವನ್ಯಜೀವಿಗಳ ಸಂಘರ್ಷ ಉಂಟಾಗಿ, ಸಾವು-ನೋವು ಸಂಭವಿಸುತ್ತವೆ. ಆದರೆ, ಬಿಹಾರದ ನಾವಡದಲ್ಲಿ ನಡೆದಿರುವ ಘಟನೆ ವಿಚಿತ್ರವಾಗಿದ್ದು, ರೈಲ್ವೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ಲೋಹರ್ ಎಂಬ ವ್ಯಕ್ತಿ, ತನಗೆ ಕಚ್ಚಿದ ವಿಷಸರ್ಪಕ್ಕೆ ಮರುಕಚ್ಚಿ, ಪವಾಡದಂತೆ ಬದುಕುಳಿದ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ರೈಲ್ವೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸಂತೋಷ್,ರಾತ್ರಿ ರಜೌಲಿ ದಟ್ಟ ಅರಣ್ಯದಲ್ಲಿ ಊಟ ಮುಗಿಸಿ, ನಿದ್ರೆಗೆ ಜಾರುವ ವೇಳೆ ವಿಷಸರ್ಪವೊಂದು ಈತನಿಗೆ ಕಚ್ಚಿದೆ. ತಕ್ಷಣ ಗಾಬರಿಗೊಳಗಾಗದ ಲೋಹರ್, ಸ್ಥಳೀಯ ಜನರ ನಂಬಿಕೆಯಂತೆ ಹಾವಿಗೆ ಎರಡು ಬಾರಿ ಕಚ್ಚಿದ್ದಾನೆ ಎನ್ನಲಾಗಿದೆ. ಇದರಿಂದ ತನ್ನ ಮೈಗೇರಿದ ವಿಷ, ಸರ್ಪಕ್ಕೆ ಹಿಂತಿರುಗಿ ಅದು ಸಾವಿಗೀಡಾಗುತ್ತದೆ ಎಂಬುದು ನಂಬಿಕೆ. ಹೆಚ್ಚಿನ ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ದಾಖಲಾದ ಸಂತೋಷ್, ವೈದ್ಯರ ಚಿಕಿತ್ಸೆಯಿಂದ ಸಾವಿನ ದವಡೆಯಿಂದ ಪಾರಾಗಿದ್ದು, ವಿಲಕ್ಷಣ ಎಂಬಂತೆ ಹಾವು ಸಾವನ್ನಪ್ಪಿದೆ.
ರಾಜೌಲಿ ದಟ್ಟ ಅರಣ್ಯದಲ್ಲಿ ರೈಲು ಹಳಿಗಳನ್ನು ಅಳವಡಿಸುವ ತಂಡದಲ್ಲಿದ್ದ ಸಂತೋಷ್ ಲೋಹರ್ (35) ಮಂಗಳವಾರ ರಾತ್ರಿ ಊಟ ಮುಗಿಸಿ ನಿದ್ರೆಗೆ ಜಾರುತ್ತಿದ್ದಾಗ ಹಾವು ಕಚ್ಚಿರುವ ಬಗ್ಗೆ ವರದಿಯಾಗಿದೆ. ತಮ್ಮ ಚಿಕಿತ್ಸೆಗೆ ಸ್ಪಂದಿಸಿದ ಸಂತೋಷ್ರನ್ನು ಘಟನೆ ನಡೆದ ಮರುದಿನವೇ ಡಿಸ್ಚಾರ್ಜ್ ಮಾಡಿರುವುದಾಗಿ ಅಲ್ಲಿನ ವೈದ್ಯರಾದ ಸಿನ್ಹಾ ತಿಳಿಸಿದ್ದಾರೆ,(ಏಜೆನ್ಸೀಸ್).