ಹಿಂದುಗಳನ್ನು ನೋಯಿಸಬೇಡಿ…ಕಲ್ಕಿ ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಿದ ಶಕ್ತಿಮಾನ್​ ಖ್ಯಾತಿಯ ಮುಕೇಶ್​!

Kalki
Published on

ನವದೆಹಲಿ: ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಗೂ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಹಾಗೂ ದಿಶಾ ಪಟಾಣಿ ಸೇರಿದಂತೆ ಬಹು ತಾರಾಗಣ ಇರುವ ಕಲ್ಕಿ 2898 AD ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ನಾಗ್ ಅಶ್ವಿನ್ ನಿರ್ದೇಶನದ ಕಾಲ್ಪನಿಕ ಚಲನಚಿತ್ರವು ಜೂನ್ 27ರಂದು ಬಿಡುಗಡೆಯಾಯಿತು. ಈ ಚಿತ್ರವು ಎಂಟು ದಿನಗಳಲ್ಲಿ ವಿಶ್ವಾದ್ಯಂತ 700 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಇದೀಗ ಖ್ಯಾತ ಚಿತ್ರನಟ ಮುಖೇಶ್ ಖನ್ನ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಅಂದಹಾಗೆ ಮುಖೇಶ್ ಖನ್ನ ಅವರು ಮಕ್ಕಳ ನೆಚ್ಚಿನ ಮಹಾಕಾವ್ಯ ಧಾರಾವಾಹಿ ಶಕ್ತಿಮಾನ್‌ನಲ್ಲಿ ಮುಖ್ಯ ಪಾತ್ರ ಶಕ್ತಿಮಾನ್​ ಅನ್ನು ನಿರ್ವಹಿಸಿದ್ದರು. ಅಲ್ಲದೆ, ಬಿಆರ್ ಚೋಪ್ರಾ ನಿರ್ದೇಶಿಸಿದ ಪ್ರಸಿದ್ಧ ಧಾರಾವಾಹಿ 'ಮಹಾಭಾರತ'ದಲ್ಲಿ ಭೀಷ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.

ಮುಕೇಶ್​ ಖನ್ನ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಕಲ್ಕಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ಆನಂದಿಸಿರುವ ಮುಕೇಶ್​, ಚಿತ್ರದ ಮೇಕಿಂಗ್​ ಅನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ಚಿತ್ರದ ಕತೆಯಲ್ಲಿನ ಕೆಲವು ಅಂಶಗಳು ಸರಿಯಿಲ್ಲ ಎಂದು ಮುಕ್ತವಾಗಿ ಹೇಳಿದ್ದಾರೆ. ಮಹಾಭಾರತದ ಕೆಲವು ಅಂಶಗಳನ್ನೇ ತಿರುಚಲಾಗಿದೆ ಅಥವಾ ವಿರೂಪಗೊಳಿಸಲಾಗಿದೆ ಎಂದು ಮುಕೇಶ್​ ಅವರು ಆರೋಪ ಮಾಡಿದ್ದಾರೆ.

ಕಲ್ಕಿ ಸಿನಿಮಾದ ಆರಂಭದಲ್ಲಿ ಶ್ರೀ ಕೃಷ್ಣನು ಅಶ್ವತ್ಥಾಮನ ‘ಮಣಿ’ಯನ್ನು ತೆಗೆದು ಶಾಪ ನೀಡುತ್ತಾರೆ. ಆದರೆ, ಇದು ಎಂದಿಗೂ ಸಂಭವಿಸಿಲ್ಲ. ನಾನು ಈ ಚಿತ್ರದಲ್ಲಿ ತಯಾರಕರಲ್ಲಿ ಒಂದನ್ನು ಕೇಳಲು ಬಯಸುತ್ತೇನೆ, ಇಲ್ಲಿ ಇಲ್ಲದಿರುವುದು ಬೇರೆಲ್ಲೂ ಇರಲು ಸಾಧ್ಯವಿಲ್ಲ ಎಂದು ಹೇಳಿದ ವ್ಯಾಸ ಮುನಿಗಿಂತಲೂ ಹೆಚ್ಚಿನದನ್ನು ನೀವು ಹೇಗೆ ತಿಳಿದಿದ್ದೀರಿ? ಅಶ್ವತ್ಥಾಮನ ‘ಮಣಿ’ಯನ್ನು ತೆಗೆದು ಹಾಕಿದ್ದು ಕೃಷ್ಣನಲ್ಲ. ನಾನು ಬಾಲ್ಯದಿಂದಲೂ ಮಹಾಭಾರತವನ್ನು ಓದುತ್ತಿದ್ದೇನೆ. ದ್ರೌಪದಿಯ ಐವರು ಮಕ್ಕಳನ್ನು ಅಶ್ವತ್ಥಾಮ ಕೊಂದ ಬಳಿಕ ಆತನ ‘ಮಣಿ’ಯನ್ನು ತೆಗೆದುಹಾಕಬೇಕೆಂದು ದ್ರೌಪದಿ ಸೂಚನೆ ನೀಡುತ್ತಾಳೆ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ ಎಂದು ಮುಕೇಶ್​ ಖನ್ನ ಹೇಳಿದ್ದಾರೆ.

ಮಾತು ಮುಂದುವರಿಸಿದ ಮುಕೇಶ್​, ಅರ್ಜುನ ಮತ್ತು ಅಶ್ವತ್ಥಾಮನ ನಡುವೆ ದೊಡ್ಡ ಯುದ್ಧವೇ ನಡೆಯಿತು. ಅವರು 'ಬ್ರಹ್ಮಾಸ್ತ್ರ'ವನ್ನು ಪ್ರಯೋಗಿಸುತ್ತಿದ್ದರು, ಆದರೆ ದಾಳಿಯನ್ನು ಹೇಗೆ ಹಿಮ್ಮೆಟ್ಟಿಸುವುದು ಎಂದು ಅರ್ಜುನನಗೆ ಮಾತ್ರ ತಿಳಿದಿತ್ತು. ಅಶ್ವತ್ಥಾಮನಿಗೆ ಇದು ಸಾಧ್ಯವಾಗದ ಕಾರಣ, ಅವನು ಅಭಿಮನ್ಯುವಿನ ಹೆಂಡತಿಯ ಕಡೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ನಿರ್ಧರಿಸಿದನು. ಅವಳು ಗರ್ಭಿಣಿಯಾದ ಕಾರಣ ಕೃಷ್ಣ ಅವಳನ್ನು ಒಂಬತ್ತು ತಿಂಗಳು ರಕ್ಷಿಸಿದನು. ನಾನು ಈ ಕಥೆಯನ್ನು ಇಷ್ಟು ವಿವರವಾಗಿ ಹೇಳಲು ಕಾರಣವೇನೆಂದರೆ, ಕಲ್ಕಿ ಸಿನಿಮಾದಲ್ಲಿ ಭವಿಷ್ಯವನ್ನು ರಕ್ಷಣೆ ಮಾಡಲು ಶ್ರೀ ಕೃಷ್ಣನು ಅಶ್ವತ್ಥಾಮನಿಗೆ ಹೇಗೆ ಆದೇಶಿಸುತ್ತಾನೆಂದು ನನಗೆ ಅರ್ಥವಾಗುತ್ತಿಲ್ಲ. ಕೃಷ್ಣನಷ್ಟು ಶಕ್ತಿಶಾಲಿ ಯಾರು ಇಲ್ಲ. ಹೀಗಿರುವಾಗ ತನ್ನನ್ನು ರಕ್ಷಿಸುವಂತೆ ಅಶ್ವತ್ಥಾಮನನ್ನು ಹೇಗೆ ಕೇಳುತ್ತಾನೆ ಎಂದು ಪ್ರಶ್ನೆ ಮಾಡಿದರು.

ಪ್ರಭಾಸ್ ಅವರ ಈ ಹಿಂದಿನ ಚಿತ್ರ ಆದಿಪುರುಷ ನೋಡಿದಂತೆಯೇ ಪ್ರತಿಯೊಬ್ಬ ಹಿಂದೂ ಈ ಬದಲಾವಣೆಗಳಿಂದ ಮನನೊಂದಿರಬೇಕು ಎಂದು ಮುಖೇಶ್ ಖನ್ನ ಹೇಳಿದ್ದಾರೆ. ಮಹಾಭಾರತ ಅಥವಾ ರಾಮಾಯಣ ವಿಚಾರದಲ್ಲಿ ನೀವು ತೆಗೆದುಕೊಂಡ ಸ್ವಾತಂತ್ರ್ಯಗಳು ಕ್ಷಮಿಸಲಾರದು. ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರು ನಮ್ಮ ಸಂಪ್ರದಾಯಗಳಿಗೆ ಹೆಚ್ಚು ಗೌರವವನ್ನು ಹೊಂದಿದ್ದಾರೆಂದು ನಾವು ಭಾವಿಸುತ್ತೇವೆ. ಆದರೆ ಇಲ್ಲಿ ಏನಾಯಿತು? ಪೌರಾಣಿಕ ಸಂಬಂಧವಿರುವ ಯಾವುದೇ ಯೋಜನೆಯನ್ನು ಸ್ಕ್ರಿಪ್ಟ್ ಹಂತದಲ್ಲಿ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರಕ್ಕಾಗಿ ಸರ್ಕಾರವು ವಿಶೇಷ ಸಮಿತಿಯನ್ನು ರಚಿಸಬೇಕು ಎಂದು ಮುಕೇಶ್​ ಖನ್ನ ಒತ್ತಾಯಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net