

ಬೆಂಗಳೂರು: ದುಬೈಯಿಂದ ಚಿನ್ನ ಕಳ್ಳ ಸಾಗಾಣಿಕೆ ಆರೋಪದಡಿ ಬಂಧಿತ ನಟಿ ರವ್ಯಾ ರಾವ್ ಪ್ರಕರಣದಲ್ಲಿ 3ನೇ ಆರೋಪಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಬ್ರಾಹ್ಮಣ ಸ್ಟ್ರೀಟ್ ನಿವಾಸಿ ಸಾಹಿಲ್ ಸಕರಿಯಾ ಜೈನ್ ಬಂಧಿತ. ಬಳ್ಳಾರಿ ಜಿಲ್ಲೆ ಬ್ರಾಹ್ಮಣ ಸ್ಟ್ರೀಟ್‌ನಲ್ಲಿ ಚಿನ್ನದಂಗಡಿ ಇಟ್ಟುಕೊಂಡಿದ್ದ. ಆರೋಪಿ ಸಾಹಿಲ್‌ನ್ನು ಬಂಧಿಸಿದ ಡಿಆರ್‌ಐ ಅಧಿಕಾರಿಗಳು, ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೇ ವೇಳೆ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ನೀಡುವಂತೆ ಡಿಆರ್‌ಐ ಪರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿಸಿದ ಕೋರ್ಟ್, ಮಾ.29ರ ವರೆಗೆ ಕಸ್ಟಡಿಗೆ ನೀಡಿ ನ್ಯಾಯಾಲಯ ತೀರ್ಪು ನೀಡಿದೆ.
ದುಬೈಯಿಂದ 14 ಕೆಜಿ ಚಿನ್ನದ ಗಟ್ಟಿ ಅಕ್ರಮ ಸಾಗಾಟದ ಆರೋಪದ ಮೇಲೆ ರನ್ಯಾ ರಾವ್‌ಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಜ.26ರಂದು ಬಂಧಿಸಿದ್ದರು. ಈಕೆ ನೀಡಿದ ಹೇಳಿಕೆ ಮೇರೆಗೆ ಐಷರಾಮಿ ಹೋಟೆಲ್ ಮಾಲೀಕನ ಪುತ್ರ ತರುಣ್ ಎಂಬಾತನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೀಗ ಬಳ್ಳಾರಿಯ ಚಿನ್ನದ ವ್ಯಾಪಾರಿ ಸಾಹಿಲ್ ಜೈನ್ ಎಂಬಾತನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಚಿನ್ನ ತರುತ್ತಿದ್ದ ರನ್ಯಾ ರಾವ್ ಜತೆಗೆ ಸಂಪರ್ಕ ಹೊಂದಿದ್ದ ಸಾಹಿಲ್ ಜೈನ್, ಆಕೆಯಿಂದ ಚಿನ್ನದ ಗಟ್ಟಿ ಖರೀದಿಸಿ ವಿಲೇವಾರಿ ಮಾಡುತ್ತಿದ್ದ. ಅಲ್ಲದೆ, ಗೋಲ್ಡ್ ಸ್ಮಗ್ಲಿಂಗ್ ಮಾಡಲು ಕುಮ್ಮಕ್ಕು ನೀಡಿರುವುದು ಮತ್ತು ಅಕ್ರಮವಾಗಿ ತಂದಿದ್ದ ಚಿನ್ನ ಮಾರಾಟಕ್ಕೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ರನ್ಯಾ ರಾವ್ ಸ್ವತಃ ಹೇಳಿಕೆ ನೀಡಿದ್ದಾಳೆ.
ಆದರಿಂದ ಕಸ್ಟಮ್ಸ್ ಕಾಯ್ದೆ 1962ರ ಸೆಕ್ಷನ್ 135 (1)(ಬಿ) ಅನ್ವಯ ಅಪರಾಧ ಮಾಡಿರುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.