

ಮುಂಬೈ: ಒರಾಂಗುಟನ್ ಮರಿ ಕಳ್ಳಸಾಗಣೆಯಾಗಿದ್ದು, ಪ್ರಾಣಿಗಳ ಹಕ್ಕುಗಳ ಗುಂಪು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ-ಇಂಡಿಯಾ) ಮುಂಬೈಯಲ್ಲಿ ಕಾಣೆಯಾದ ಒರಾಂಗುಟಾನ್ ಮರಿಯನ್ನು ಪತ್ತೆಹಚ್ಚಲು ಸಹಾಯ ಮಾಡಿದವರಿಗೆ ಸೋಮವಾರ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.
"ಈ ಪ್ರಕರಣದ ಬಗ್ಗೆ ಮಾಹಿತಿ ಇರುವ ಯಾರಾದರೂ PETA-India ದ ತುರ್ತು ಸಹಾಯವಾಣಿ ಸಂಖ್ಯೆ +91 9820122602 ಅಥವಾ ಇಮೇಲ್: Info@petaindia.org ಗೆ ಸಂಪರ್ಕಿಸಬಹುದು. ಮಾಹಿತಿದಾರರು ಕೋರಿದಲ್ಲಿ ಅವರ ಹೆಸರು ಮತ್ತು ವಿವರವನ್ನು ಗೌಪ್ಯವಾಗಿಡಲಾಗುತ್ತದೆ. ಕೊನೆಯ ಬಾರಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ನೋಡಲಾಗಿದ್ದು, ಆ ಮರಿಯನ್ನು ಪತ್ತೆಹಚ್ಚಿ ರಕ್ಷಿಸಲು ಶ್ರಮಿಸುತ್ತಿದ್ದೇವೆ ಎಂದು ಪ್ರಾಣಿ ಹಕ್ಕುಗಳ ಸಂಘಟನೆ ಹೇಳಿದೆ.
ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ಪೆಟಾ ಪಶುವೈದ್ಯರು ನಡೆಸಿದ ತನಿಖೆಯ ಪ್ರಕಾರ, ಒರಾಂಗುಟಾನ್ ಕೊನೆಯ ಬಾರಿಗೆ ಮುಂಬೈನ ಅಗ್ರಿಪಾಡಾದ ಮನೆಯೊಂದರಲ್ಲಿ ಕಾಣಿಸಿಕೊಂಡಿತ್ತು. ಶಂಕಿತ ಒರಾಂಗುಟನ್ ಅನ್ನು ಅಕ್ರಮವಾಗಿ ವಶಕ್ಕೆ ವಶಪಡಿಸಿಕೊಂಡಿದ್ದಾನೆನ್ನಲಾಗಿದೆ.
ಮತ್ತೊಂದೆಡೆ, ಬಾಂದ್ರಾದಲ್ಲಿರುವ ಮತ್ತೊಂದು ಕುಟುಂಬವು ಅದರ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ ಎಂದು ಆರೋಪಿಸಲಾಗಿದೆ. ಅರಣ್ಯ ಇಲಾಖೆ ನಡೆಸಿದ ತನಿಖೆಯಲ್ಲಿ ಒರಾಂಗುಟಾನ್ ಅನ್ನು ಅದರ ಮೂಲ ದೇಶದಿಂದ ಪರವಾನಗಿ ಇಲ್ಲದೆ ದೇಶಕ್ಕೆ ತರಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಅನಿಮಲ್ ಕ್ವಾರೆಂಟೈನ್ ಆ್ಯಂಡ್ ಸರ್ಟಿಫಿಕೇಶನ್ ಸರ್ವೀಸಸ್ ಅಥವಾ ಕಸ್ಟಮ್ಸ್ ಇಲಾಖೆಯಿಂದ ಯಾವುದೇ ಅನುಮೋದನೆ ಪಡೆಯಲಾಗಿಲ್ಲ ಎಂದು ಹೆಚ್ಚಿನ ತನಿಖೆಯಲ್ಲಿ ತಿಳಿದುಬಂದಿದೆ. ಒರಾಂಗುಟಾನ್ ಅನ್ನು ಭಾರತಕ್ಕೆ ಕರೆತಂದ ರಹಸ್ಯ ವಿಧಾನದ ಬಗ್ಗೆ ತಿಳಿದ ನಂತರ, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋಗೆ ಪೆಟಾ ದೂರು ನೀಡಿದೆ.
ಇಂಥ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಆಟಿಕೆ ಅಥವಾ ಪ್ರದರ್ಶನ ವಸ್ತುವಾಗಿ ಬಳಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರ ಸಹಾಯ ಕೋರುತ್ತೇವೆ ಎಂದು ಪೇಟಾ ಪಶುವೈದ್ಯಕೀಯ ಸೇವೆಗಳ ವ್ಯವಸ್ಥಾಪಕಿ ಡಾ.ರಶ್ಮಿ ಗೋಖಲೆ ಹೇಳಿದರು.