ಕಾಮಗಾರಿಗಳಲ್ಲಿ ಅಕ್ರಮದ ವಾಸನೆ?

purasabhe
ತರೀಕೆರೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಎಚ್.ಮಹಾಂತೇಶ್ ಮಾತನಾಡಿದರು. ಅಧ್ಯಕ್ಷೆ ಕಮಲಾ, ಉಪಾಧ್ಯಕ್ಷೆ ರಿಹಾನ ಪರ್ವೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕುಮಾರಪ್ಪ ಇದ್ದರು.
Published on

ತರೀಕೆರೆ: ಸಾರ್ವಜನಿಕರಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಕಾವಲು ಕಾಯಬೇಕಾದ ನಮ್ಮಿಂದಲೇ ದರೋಡೆ ನಡೆದರೆ ಹೇಗೆ ಎಂದು ಸದಸ್ಯ ಟಿ.ಎಂ.ಬೋಜರಾಜ್ ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಗುರುವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 2022ರ ಅಕ್ಟೋಬರ್‌ನಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಪಟ್ಟಣಕ್ಕೆ ಆಗಮಿಸಿ ಮಿನಿ ವಿಧಾನಸೌಧ ಆವರಣದಲ್ಲಿ ನಿರ್ಮಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದ್ದರು. ಪಟ್ಟಣದ ವಿವಿಧೆಡೆ ಸಿಎಂ ಆಗಮನಕ್ಕೆ ಸ್ವಾಗತ ಬಯಸಿ ಕಟೌಟ್ ಅಳವಡಿಸಿದ್ದಲ್ಲದೇ, ಭಿನ್ನವತ್ತಳೆ ತಯಾರಿಸಲು 22,050 ರೂ. ಬಿಲ್ ಮಾಡಲಾಗಿತ್ತು. ಈ ಬಿಲ್ ಮೊತ್ತವನ್ನು ಪ್ರತ್ಯೇಕ ಬ್ಯಾಂಕ್ ಖಾತೆಗಳ ಮೂಲಕ ಎರಡೆರಡು ಬಾರಿ ಡ್ರಾ ಮಾಡಲಾಗಿದೆ ಎಂದು ದೂರಿದರು.
ವಿಶ್ವ ಪರಿಸರ ದಿನಾಚರಣೆಯಂದು ಪಟ್ಟಣದ ಅಲ್ಲಲ್ಲಿ ಸಸಿ ನೆಡಲು ಸಾಮಾಜಿಕ ಅರಣ್ಯ ಇಲಾಖೆಯಿಂದ ವಿವಿಧ ಜಾತಿಯ ಗಿಡಗಳನ್ನು ಉಚಿತವಾಗಿ ಪಡೆಯಲಾಗಿದೆ. ಆದರೆ 25 ಸಾವಿರ ರೂ. ಪಾವತಿಸಿ ಸಸಿ ಖರೀದಿಸಲಾಗಿದೆ ಎಂದು ಸುಳ್ಳು ಲೆಕ್ಕ ತೋರಿಸಲಾಗಿದೆ ಎಂದು ಆಪಾದಿಸಿದರು.
ಇದಕ್ಕೆ ಪರಿಸರ ಇಂಜಿನಿಯರ್ ತಾಹೀರಾ ತಸ್ನೀಮ್ ಪ್ರತಿಕ್ರಿಯಿಸಿ, ಸಾಮಾಜಿಕ ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ಮಾತ್ರ ಉಚಿತ ಸಸಿ ವಿತರಿಸಲು ಅವಕಾಶವಿದೆ. ಹೀಗಾಗಿ ಪುರಸಭೆ ವೈಯಕ್ತಿಕವಾಗಿ ಹಂಚಲು ಸಸಿ ಖರೀದಿಸಿದ್ದು ವಿವಿಧ ಶಾಲೆಗಳಿಗೆ ವಿತರಿಸಲಾಗಿದೆ ಎಂದು ಉತ್ತರಿಸಿದರು.
ಟಿ.ಜಿ.ಅಶೋಕ್‌ಕುಮಾರ್ ಮಾತನಾಡಿ, ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಸೊಳ್ಳೆ ಕಾಟ, ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಹೊರಗಡೆ ಓಡಾಡುವಂತಿಲ್ಲ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಮಹಾಂತೇಶ್ ಉತ್ತರಿಸಿ, ಸೊಳ್ಳೆ ನಿಯಂತ್ರಣಕ್ಕೆ ಪುರಸಭೆಯ ಆರೋಗ್ಯ ಶಾಖೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಲಾರ್ವಾ ಸರ್ವೇ ಮಾಡುತ್ತಿರುವುದು ಮಾತ್ರವಲ್ಲ, ಜನರಿಗೆ ಸೊಳ್ಳೆ ಕಡಿತದಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಟಿ.ಎಂ.ಬೋಜರಾಜ್ ಮಾತನಾಡಿ, ಮಳೆ ಕಡಿಮೆಯಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಯಾಗುತ್ತಿಲ್ಲ. ಅಕ್ಕನಾಗಲಾಂಬಿಕೆ ಕಾಲನಿಯಲ್ಲಿ ಕೆಲ ದಿನಗಳ ಹಿಂದೆ ಕಲುಷಿತ ನೀರು ಪೂರೈಕೆಯಾಗಿದ್ದು, ಅದರಲ್ಲಿ ಕಪ್ಪು ತಲೆಯ ಹುಳುಗಳು ಕಾಣಿಸಿಕೊಂಡಿವೆ. ಇದರಿಂದ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಮಹಾಂತೇಶ್ ಮಾತನಾಡಿ, ಅಕ್ಕನಾಗಲಾಂಬಿಕೆ ಕಾಲನಿಯಲ್ಲಿ ಕುಡಿಯುವ ನೀರು ಪೂರೈಸುವ ಸಲುವಾಗಿ ಅಳವಡಿಸಿರುವ ಪೈಪ್‌ಲೈನ್ ಬಳಿ ಕಲುಷಿತ ನೀರು ಸಂಗ್ರಹಗೊಂಡಿರುವ ತೊಟ್ಟಿ ಇದೆ. ಇದರಿಂದ ಗಲೀಜು ನೀರು ಪೈಪ್‌ಲೈನ್ ಮೂಲಕ ಹರಿದಿದೆ. ಗಮನಕ್ಕೆ ಬಂದ ತಕ್ಷಣ ದುರಸ್ತಿಗೊಳಿಸಿ ಪ್ರಾಯೋಗಿಕವಾಗಿ ನೀರು ಹರಿಸಿದಾಗ ಹುಳುಗಳು ಕಾಣಿಸಿಕೊಂಡಿದೆ. ಇದರ ಹೊರತು ಈ ನೀರು ಯಾವ ಮನೆಗೂ ತಲುಪಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಅಧ್ಯಕ್ಷೆ ಕಮಲಾ, ಉಪಾಧ್ಯಕ್ಷೆ ರಿಹಾನ ಪರ್ವೀನ್ ಇತರರಿದ್ದರು.
ನೆಟ್ಟಿರುವುದು ಮನಿ ಪ್ಲಾಂಟಾ?: ಪಟ್ಟಣದ ಲಿಂಗದಹಳ್ಳಿ ರಸ್ತೆ ನಡುವೆ ಇರುವ ಡಿವೈಡರ್‌ನಲ್ಲಿ ವಿವಿಧ ಜಾತಿಯ ಹೂವಿನ ಮತ್ತು ಅಲಂಕಾರಿಕಾ ಗಿಡಗಳನ್ನು ಪೌರ ಕಾರ್ಮಿಕರು ನೆಟ್ಟಿದ್ದಾರೆ. ಕೆಮ್ಮಣ್ಣು ಸಾಗಣೆಗೆ ಪುರಸಭೆ ಟ್ರಾೃಕ್ಟರ್ ಬಳಸಲಾಗಿದೆ. ಆದರೆ ಅಧಿಕಾರಿಗಳು ಗುತ್ತಿಗೆದಾರರ ಹೆಸರಿಗೆ 4.32 ಲಕ್ಷ ರೂ. ಹಣ ಪಾವತಿ ಮಾಡಿದ್ದಾರೆ. ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಟಿ.ಜಿ.ಅಶೋಕ್‌ಕುಮಾರ್ ದೂರಿದರು. ಹಣ ಲಪಟಾಯಿಸಲು ಗಿಡ ನೆಟ್ಟು ಸೂಕ್ತ ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆ. ಈ ಗಿಡಗಳು ಅಲಂಕಾರಿಕವೇ ಅಥವಾ ಮನಿ ಪ್ಲಾಂಟಾ ಎಂದು ಪ್ರಶ್ನಿಸಿದರು. ಗುತ್ತಿಗೆದಾರರ ಪಾತ್ರವೇ ಇಲ್ಲದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು, ಡಿಸಿಗೆ ವರದಿ ಸಲ್ಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಖರ್ಚೇ ಜಾಸ್ತಿ: ಕಳೆದ ವಿಧಾನಸಭೆ ಚುನಾವಣೆಗೆ ವಿವಿಧ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಚುನಾವಣಾ ಆಯೋಗ ಮಾಡಿದ ಖರ್ಚಿಗಿಂತ ಪುರಸಭೆಯ ಖರ್ಚೇ ಅಧಿಕವಾಗಿದೆ. ಇದಕ್ಕೆ ಸರ್ಕಾರದ ಮಾರ್ಗಸೂಚಿಗಳಿವೆಯೇ ಎಂದು ಅಧಿಕಾರಿಗಳನ್ನು ಟಿ.ಎಂ.ಬೋಜರಾಜ್ ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಟಿ.ದಾದಾಪೀರ್, ಈ ಸಂದರ್ಭಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಧಿಕಾರಿಗಳು ಜನರ ಹಣ ಬೇಕಾದಂತೆ ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದರು. ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ಎಲ್ಲ ಮತಗಟ್ಟೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಹೊಣೆಗಾರಿಕೆ ಪುರಸಭೆಯದ್ದು. ಹಾಗಾಗಿ ಖರ್ಚು ಮಾಡಲಾಗಿದೆ. ಇದರಲ್ಲಿ ಯಾವುದೇ ಲೋಪ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಒತ್ತುವರಿ ತೆರವುಗೊಳಿಸಿ: ಹಳಿಯೂರು ಸರ್ಕಾರಿ ಶಾಲೆ ಮತ್ತು ಅಂಗನವಾಡಿಯ ಎಕರೆಗಟ್ಟಲೇ ಜಾಗವನ್ನು ಪ್ರಭಾವಿಗಳು ಅತಿಕ್ರಮಿಸಿಕೊಂಡಿದ್ದು, ಈ ಸಂಬಂಧ ಎಸಿಗೆ ದೂರು ಸಲ್ಲಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಬೇಕಾದ ಕ್ರಮ ಕೈಗೊಳ್ಳಬೇಕು. ಈ ಜಾಗವನ್ನು ಆಟದ ಮೈದಾನಕ್ಕೆ ಮೀಸಲಿರಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net