ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಎಸ್​.ಎಂ.ಕೃಷ್ಣ; ದೆಹಲಿಯಲ್ಲಿ ರಾಷ್ಟ್ರಪತಿಯಿಂದ ಪ್ರದಾನ

S M Krishna Padma Award
Published on

ನವದೆಹಲಿ: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್​.ಎಂ. ಕೃಷ್ಣ ಅವರಿಗೆ ಈ ಯುಗಾದಿ ಸ್ಮರಣೀಯವಾಗಿ ಉಳಿಯಲಿದೆ. ಏಕೆಂದರೆ ಇಂದೇ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನವಾಗಿದೆ.

ದೆಹಲಿಯಲ್ಲಿ ಇಂದು ಆಯ್ದ ಕೆಲವರಿಗೆ 2023ರ ಪದ್ಮಪ್ರಶಸ್ತಿಗಳ ಪ್ರದಾನ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಹಂತಗಳಲ್ಲಿ ಪ್ರದಾನವಾಗುವ ಈ ಪ್ರಶಸ್ತಿಯ ಮೊದಲ ಹಂತದ ಪ್ರದಾನ ಯುಗಾದಿ ದಿನವಾದ ಇಂದು ನಡೆದಿದೆ.

ಕನ್ನಡಿಗರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ, ಇನ್‌ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾ ಮೂರ್ತಿ ಸೇರಿದಂತೆ ದೇಶದ ಅನೇಕ ಸಾಧಕರಿಗೆ ಪದ್ಮಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಜ. 25ರಂದು ಪ್ರಕಟಿಸಿತ್ತು. ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ ಹಾಗೂ ಎಸ್.ಎಲ್. ಭೈರಪ್ಪ ಮತ್ತು ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪುರಸ್ಕಾರವನ್ನು ಅಂದು ಘೋಷಣೆ ಮಾಡಲಾಗಿತ್ತು.

ಆ ಪೈಕಿ ಕರ್ನಾಟಕದಿಂದ ಇಂದು ಎಸ್​.ಎಂ.ಕೃಷ್ಣ ಪದ್ಮವಿಭೂಷಣ ಪುರಸ್ಕಾರ ಸ್ವೀಕರಿಸಿದ್ದು, ಉದ್ಯಮಿ ಕುಮಾರಮಂಗಲಂ ಬಿರ್ಲಾ ಸೇರಿದಂತೆ ಕೆಲವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇನ್ನುಳಿದ ಸಾಧಕರಿಗೆ ಮುಂದಿನ ಹಂತಗಳಲ್ಲಿ ಪ್ರದಾನ ನಡೆಯಲಿದೆ.

ದೇಶದಲ್ಲಿ ಈ ಸಲ ಒಟ್ಟು 106 ಮಂದಿಯನ್ನು ಪದ್ಮಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆ ಪೈಕಿ 6 ಸಾಧಕರನ್ನು ಪದ್ಮವಿಭೂಷಣ, 9 ಸಾಧಕರನ್ನು ಪದ್ಮಭೂಷಣ ಮತ್ತು 91 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net