Slum: ಸ್ಲಂ ಏರಿಯಾಗೆ ಒಂಟಿಯಾಗಿ ಹೋದ ವಿದೇಶಿಗ! ಜನರಿಂದ ಆತನಿಗಾದ ಅನುಭವವಾದರೂ ಏನು ಗೊತ್ತಾ?

Slum
Published on

ನವದೆಹಲಿ: ಬಡತನವನ್ನೇ ಹೊದ್ದು ಮಲಗಿದಂತಿರುವ ಭಾರತದ ಕೊಳಗೇರಿ(Slum) ಪ್ರದೇಶದಲ್ಲಿನ ಸ್ಥಿತಿಗತಿ ವರದಿ ಮಾಡಲು ಒಂಟಿಯಾಗಿ ತೆರಳಿದ್ದ ವಿದೇಶಿಗನಿಗೆ ಅಲ್ಲಿನ ಜನರಿಂದ ಅನಿರೀಕ್ಷಿತ ಅನುಭವವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ದೆಹಲಿಯ ಕುಸುಮ್ ಪಹಾಡಿ ಪ್ರದೇಶಕ್ಕೆ ಯೂಟ್ಯೂಬರ್ ಕ್ರಿಸ್ ತೆರಳಿದ್ದ. ಅಲ್ಲಿನ ಜನಜೀವನ ಮತ್ತು ಮೂಲಸೌಲಭ್ಯಗಳ ಬಗ್ಗೆ ಭಯದಿಂದಲೇ ಕ್ಯಾಮೆರಾದಲ್ಲಿ ರೆಕಾರ್ಡಿಂಗ್ ಆರಂಭಿಸಿದ್ದ.

ಇದು ಭಾರತದ ಅತ್ಯಂತ ಬಡ ಪ್ರದೇಶವಾಗಿದೆ. ಇಲ್ಲಿ ಮಕ್ಕಳು ಆಹಾರಕ್ಕಾಗಿ ಕಸದ ತೊಟ್ಟಿಗಳನ್ನು ಹುಡುಕುತ್ತಾರೆ. ಸ್ನಾನಗೃಹಗಳಿಲ್ಲ. ಕುಟುಂಬದ ದೈನಂದಿನ ಗಳಿಕೆ 20 ಡಾಲರ್ ಕೂಡ ಇಲ್ಲ. ಒಳ್ಳೆಯ ನೀರಿಗಾಗಿ ಜಗಳವಾಡುತ್ತಾರೆ. ಕಸದ ರಾಶಿಯ ಮೇಲೆಯೇ ಬದುಕಬೇಕು ಎಂದು ವೀಡಿಯೋದಲ್ಲಿ ಕ್ರಿಸ್ ವಿವರಿಸುತ್ತಿದ್ದ.

ಇದನ್ನೆಲ್ಲ ಕಂಡು ಸ್ಥಳೀಯ ಕೆಲ ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಕ್ರಿಸ್​ನನ್ನು ಕರೆದು ಟೀ, ಬಿಸ್ಕತ್ ಕೊಟ್ಟರು.ಷೇಕ್​ಹ್ಯಾಂಡ್​ ನೀಡಿದರು. ಅಷ್ಟೇ ಅಲ್ಲ, ಆತನ ಅಪೇಕ್ಷೆ ಮೇರೆಗೆ ಹಾಡುಗಳ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಬಡವರಾಗಿದ್ದರೂ ಮಹಿಳೆಯರ ಒಳ್ಳೆಯ ಮನಸ್ಸು ಕಂಡು ಕ್ರಿಸ್ ಆಶ್ಚರ್ಯಚಕಿತನಾದ. ಆ ಬಳಿಕ ಅಲ್ಲಿನ ಕ್ಷೌರದಂಗಡಿಗೆ ಹೋಗಿ ಶೇವ್ ಮಾಡಿಸಿಕೊಂಡಿದ್ದಾನೆ. ಬೆಲೆ ಕೇಳಿದಾಗ ಕ್ಷೌರಿಕ 50 ರೂ. ಹೇಳಿದ್ದಾನೆ. ಆತ 5ನೂರು ಕೊಟ್ಟರೂ ನಿರಾಕರಿಸಿದ್ದಾನೆ. ಇದು ಭಾರತೀಯರ ಪ್ರಾಮಾಣಿಕತೆಗೆ ಸಾಕ್ಷಿ ಎಂದು ಕ್ರಿಸ್​ ವಿವರಿಸಿದ್ದಾನೆ.

ಬಳಿಕ ಕ್ರಿಸ್​ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೀಡಿಯೊ ವೈರಲ್ ಆಗಿದೆ. ನೆಟ್ಟಿಗರು, ಭಾರತವನ್ನು ಬಡದೇಶವೆಂದು ನಂಬುವವರಿಗೆ ಇಲ್ಲಿನ ಬಡವರ ಒಳ್ಳೆಯ ಹೃದಯ ಮತ್ತು ಅವರ ಆತಿಥ್ಯ ಎಂಥದ್ದು ಎಂದು ಇದರಿಂದ ಮನಗಾಣಬಹುದು ಎಂದಿದ್ದಾರೆ. ಇನ್ನೂ ಕೆಲವರು ಕ್ರಿಸ್ ಭಾರತದ ಕೊಳಚೆ ಪ್ರದೇಶಗಳು ಹಾಗೂ ಐಷಾರಾಮಿ ಪ್ರದೇಶಗಳಿಗೆ ಭೇಟಿ ನೀಡಿ ಅನುಭವ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net